Site icon newsroomkannada.com

ಪ್ರೌಢಶಾಲೆ ಕಟ್ಟಡ ಉದ್ಘಾಟನೆ , ರಜತ ಮಹೋತ್ಸವ ಆಚರಣೆ

ಮಂಗಳೂರು: ಜಾಣು ಶೆಟ್ಟಿ ಮೆಮೋರಿಯಲ್‌ ಎಜುಕೇಶನಲ್‌ ಮತ್ತು ಚಾರಿಟೆಬಲ್‌ ಟ್ರಸ್ಟ್‌ ನಡೆಸುತ್ತಿರುವ ಅಮೃತೇಶ್ವರ ಆಂಗ್ಲಮಾಧ್ಯಮ ಶಾಲೆ ಅಮೃತೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆ ಕಟ್ಟಡ ಉದ್ಘಾಟನೆ ಹಾಗೂ ರಜತ ಮಹೋತ್ಸವ ಆಚರಣೆ ಜ.18ರಂದು ನಡೆಯಲಿದೆ ಎಂದು ಶಾಲೆ ಆಡಳಿತ ಮಂಡಳಿ ಸಲಹೆಗಾರ ಅಶ್ವಿನ್‌ ಶೆಟ್ಟಿ ತಿಳಿಸಿದ್ದಾರೆ.,

ಮಂಗಳೂರಿನ ಪ್ರೆಸ್‌ ಕ್ಲಬ್‌ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮವನ್ನು ಜ.17ರಂದು ಬುಧವಾರ ಕಾರ್ಯಕ್ರಮವನ್ನು ಸಂಸದ ನಳಿನ್‌ ಕುಮಾರ್‌ ಉದ್ಘಾಟಿಸಲಿದ್ದಾರೆ. ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಆಳ್ವಾಸ್‌ ವಿದ್ಯಾಸಂಸ್ಥೆ ಅಧ್ಯಕ್ಷ ಮೋಹನ್‌ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆ ಅಧ್ಯಕ್ಷ ಸೀತಾರಾಮ ಜೆ. ಶೆಟ್ಟಿ, ಪುರುಷೋತ್ತಮ ಮೊದಲಾದವರಿದ್ದರು.

ಸಂಸ್ಥೆ ಇತಿಹಾಸ: 1999-20ನೇ ಶೈಕ್ಷಣಿಕ ವರ್ಷದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ಸೀತಾರಾಮ್ ಜೆ. ಶೆಟ್ಟಿಯವರು ತಮ್ಮ ತಂದೆಯ ಆಶಯದಂತೆ ಅಮೃತೇಶ್ವರ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಿದರು. 2016-17 ರಲ್ಲಿ ಗ್ರಾಮದ ಜನರ ಒತ್ತಾನೆಯಂತೆ ಅಂಗ್ಲ ಮಾಧ್ಯಮವಾಗಿ ಪರಿವರ್ತಿಸಲಾಯಿತು. ಸುಮಾರು 17 ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ, ಬ್ಯಾಗ್, ಊಟ ಹಾಗೂ ಉಚಿತ ಶಿಕ್ಷಣವನ್ನು ನೀಡಿರುವುದು ಶ್ರೀ ಸೀತಾರಾಮ ಜೆ. ಶೆಟ್ಟಿ ಹಾಗೂ ಅವರ ಕುಟುಂಬದ ಶಿಕ್ಷಣ ಪ್ರೇಮಕ್ಕೆ ಸಾಕ್ಷಿ

ಸಂಸ್ಥೆಯು ಮಂಗಳೂರು ಪುರಸಭೆಯ ವ್ಯಾಪ್ತಿಯಲ್ಲಿದ್ದರೂ ನಿಸರ್ಗ ಮನೋಹರ ಒಂದು ಗ್ರಾಮೀಣ ಸಂಸ್ಥೆ ಪ್ರಶಾಂತ ವಾತಾವರಣ, ಗದ್ದೆ, ತೋಟಗಳಿಂದ ಸುತ್ತುವರಿಯಲ್ಪಟ್ಟಿದ್ದು ವಿದ್ಯಾರ್ಜನೆಗೆ ಪೂರಕ ಪರಿಸರ ಹೊಂದಿದೆ.

2021-22 ರ ಶೈಕ್ಷಣಿಕ ವರ್ಷದಲ್ಲಿ ಪ್ರೌಢಶಾಲಾ ವಿಭಾಗಕ್ಕೆ ಅನುಮತಿ ದೊರೆತಿದ್ದು, 2022-23 ರ ಪ್ರಥಮ SSLC ಬ್ಯಾಚಿಗೆ 100% ಫಲಿತಾಂಶ ಬಂದಿರುವುದು ಸಂಸ್ಥೆಯ ಶೈಕ್ಷಣಿಕ ಸಾಧನೆಗೆ ಹಿಡಿದ ಕೈಗನ್ನಡಿ ಇದೀಗ ಸಂಸ್ಥೆಯಲ್ಲಿ ಪೂರ್ವ ಪ್ರಾಥಮಿಕ ತರಗತಿಯಿಂದ 10ನೇ ತರಗತಿಯವರೆಗೆ 442 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, 15 ಮಂದಿ ಪ್ರಬುದ್ಧ ಶಿಕ್ಷಕರು, 7 ಮಂದಿ ಶಿಕ್ಷಕೇತರ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ನೂತನ ಕಟ್ಟಡವು 3 ಅಂತಸ್ತಿನ ಕಟ್ಟಡವಾಗಿದ್ದು, ಒಟ್ಟು 12 ತರಗತಿ ಕೊಠಡಿಗಳನ್ನು ಹೊಂದಿರುತ್ತದೆ. ಮುಂದಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಬೇಕಿದ್ದಲ್ಲಿ 11 ಹಾಗೂ 12 ನೇ ತರಗತಿಗಳನ್ನು ಪ್ರಾರಂಭಿಸಲು ಸಾಧ್ಯವಾಗುವಂತೆ 4 ಹೆಚ್ಚುವರಿ ಕೊಠಡಿಗಳನ್ನು ಹೊಂದಿರುತ್ತದೆ.

ಉತ್ತಮ ಶಿಕ್ಷಣದೊಂದಿಗೆ ಸಂಸ್ಕಾರ, ಸಂಸ್ಕೃತಿ, ವಿನಯಶೀಲತೆ, ಶಿಸ್ತು, ಕ್ರೀಡೆ, ಕಂಪ್ಯೂಟರ್ ಶಿಕ್ಷಣ, ಯೋಗ, ಕರಾಟೆ, ಸಂಗೀತ ನೃತ್ಯ, ಯಕ್ಷಗಾನ, ಭಜನೆ ಇತ್ಯಾದಿಗಳಿಂದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪ್ರೋತ್ಸಾಹಿಸುತ್ತಾ ಬಂದಿರುವುದು ನಮ್ಮ ಶಿಕ್ಷಣ ಸಂಸ್ಥೆಯ ವೈಶಿಷ್ಟ್ಯ. ಈ ಸಂದರ್ಭದಲ್ಲಿ ನೂತನ ಪ್ರೌಢಶಾಲಾ ಕಟ್ಟಡದ ಉದ್ಘಾಟನೆ ಹಾಗೂ ರಜತ ಮಹೋತ್ಸವದ ಸವಿನೆನಪಿಗಾಗಿ ನಾಡಿನ ಯತಿವರ್ಯರು, ಗಣ್ಯರು, ಹಳೆವಿದ್ಯಾರ್ಥಿಗಳು, ರಕ್ಷಕ ಬಂಧುಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಮಕ್ಷಮದಲ್ಲಿ ‘ ಅಮೃತ ವಾಹಿನಿ ಎಂಬ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಗುವುದು. ಆಳ್ವಾಸ್ ಸಮೂಹ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ. ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಧಕರಿಗೆ ಸನ್ಮಾನ ಹಾಗೂ ಸಹ ಭೋಜನ ವ್ಯವಸ್ಥೆಯನ್ನು ಮಾಡಲಾಗಿದೆ .

Exit mobile version