ಮೈಸೂರು: ವಿಶ್ವವಿಖ್ಯಾತ ದಸರಾ ಉತ್ಸವಕ್ಕೆ (Mysuru Dasara) ಪೂರ್ವ ತಯಾರಿಗಳು ಒಂದೊಂದಾಗಿ ಪ್ರಾರಂಭಗೊಂಡಿರುವಂತೆ ಇದೀಗ ನಾಡಹಬ್ಬವನ್ನು ಉದ್ಘಾಟಿಸುವ ಮಹನೀಯರ ಹೆಸರು ಪ್ರಕಟಗೊಂಡಿದೆ.
ಕನ್ನಡ ಚಲನಚಿತ್ರರಂಗದಲ್ಲಿ (Sandalwood) ತನ್ನ ವಿಶಿಷ್ಟ ಸಂಗೀತ ಮತ್ತು ಸಾಹಿತ್ಯಗಳ ಮೂಲಕ ಹೊಸ ಸಂಚಲನ ಸೃಷ್ಟಿಸಿರುವ ‘ನಾದಬ್ರಹ್ಮ’ ಎಂಬ ಗೌರವಕ್ಕೆ ಪಾತ್ರರಾಗಿರುವ ಹಿರಿಯ ಸಂಗೀತ ನಿರ್ದೇಶಕ ಮತ್ತು ಚಿತ್ರಸಾಹಿತಿ ಹಂಸಲೇಖ (Hamsalekha) ಅವರಿಗೆ ಈ ಬಾರಿಯ ನಾಡಹಬ್ಬವನ್ನು ಉದ್ಘಾಟಿಸುವ ಭಾಗ್ಯ ಒದಗಿ ಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇಂದು (ಆ.29) ಮೈಸೂರಿನಲ್ಲಿ ಹಂಸಲೇಖ ಅವರ ಹೆಸರನ್ನು ಘೋಷಣೆ ಮಾಡಿದ್ದಾರೆ.
ನಾಡಹಬ್ಬದ ಉದ್ಘಾಟನೆಗೆ ತನ್ನ ಹೆಸರು ಘೋಷಣೆಗೊಂಡ ಬಳಿಕ ಸುದ್ದಿಗೋಷ್ಠಿ ನಡೆಸಿ ಹರ್ಷ ವ್ಯಕ್ತಪಡಿಸಿದ ಹಂಸಲೇಖ ಅವರು, ‘ದಸರಾ ಎಂಬುದು ನಾಲ್ವಡಿ ಕೃಷ್ಣರಾಜ ಒಡೆಯರ (Krishna Raja Wadiyar IV) ಕನಸು, ನನಗೆ ಈಗ ಸಂತೋಷವನ್ನೂ ತಡೆದುಕೊಳ್ಳಬೇಕಾಗಿರುವ ವಯಸ್ಸು. ಹಾಗಾಗಿ ಅದಕ್ಕೊಂದು ನಿಯಂತ್ರಣ ಬೇಕು..ಮೊದಲಿನ ಹಾಗೆಲ್ಲಾ ಮಾತನಾಡುವ ಹಾಗಿಲ್ಲ. ಮೊದಲನೆಯದಾಗಿ ಎಲ್ಲಾ ಕಲಾವಿದರ ಪರವಾಗಿ ರಾಜ್ಯ ಸರಕಾರಕ್ಕೆ ಧನ್ಯವಾದ ತಿಳಿಸಬೇಕು. ದಸರಾ ಎಂದರೆ ಬಹುದೊಡ್ಡ ಸಂಭ್ರಮ, ಆ ಸಂಭ್ರಮವನ್ನು ಉದ್ಘಾಟಿಸಲು ನನ್ನಂತಹ ಸ್ಟ್ರೀಟ್ ಫೈಟರನ್ನು ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು..’ ಎಂದು ಹಂಸಲೇಖ ಪ್ರತಿಕ್ರಿಯಿಸಿದ್ದಾರೆ.
‘ನಾನು ಪ್ರಜಾಪ್ರತಿನಿಧಿಯೋ ಅಲ್ಲವೋ ಎಂದು ಗೊತ್ತಿಲ್ಲ ಆದರೆ ಒಬ್ಬ ಕಲಾ ಪ್ರತಿನಿಧಿಯಾಗಿ, ಕನ್ನಡ ಚಿತ್ರರಂಗದ ಪರವಾಗಿ ಅಲ್ಲಿ ನಾನು ದೀಪ ಹಚ್ಚಲಿದ್ದೇನೆ..’ ಎಂದು ಹಂಸಲೇಖ ಅವರು ವಿನಮ್ರತೆಯ ನುಡಿಗಳನ್ನಾಡಿದರು.
ಇನ್ನೊಂದೆಡೆ, ಈ ಬಾರಿಯ ದಸರಾ ಉತ್ಸವವನ್ನು ಸಂಗೀತ ನಿರ್ದೇಶಕ ಹಂಸಲೇಖ ಅವರು ಉದ್ಘಾಟನೆ ಮಾಡುತ್ತಾರೆಂಬ ವಿಚಾರ ಇದೀಗ ಪರ-ವಿರೋಧ ಚರ್ಚೆಗಳಿಗೂ ಕಾರಣವಾಗಿದೆ.
ಈ ಹಿಂದೆ ಹಂಸಲೇಖ ಅವರು ಪೇಜಾವರ ಹಿರಿಯ ಶ್ರೀಗಳ ವಿರುದ್ಧ ನೀಡಿದ್ದ ಹೇಳಿಕೆ ಮತ್ತು ಇತ್ತೀಚೆಗೆ ಕಾಂಗ್ರೆಸ್ (Congress) ಪರವಾಗಿ ಬಿಜೆಪಿ (BJP) ಸರಕಾರದ ವಿರುದ್ಧ ನಡೆದಿದ್ದ ಪ್ರತಿಭಟನೆಯಲ್ಲಿ ಅವರು ಪಾಲ್ಗೊಂಡಿರುವ ವಿಚಾರಗಳು ಮತ್ತೆ ಮುನ್ನಲೆಗೆ ಬಂದು ಪರ-ವಿರೋಧ ಚರ್ಚೆಗೆ ನಾಂದಿ ಹಾಡಿದೆ.