Site icon newsroomkannada.com

‘ಚಂದ್ರಯಾನ ಯಶಸ್ಸಿನ ಕೀರ್ತಿ ಯಾರಿಗೆ ಸಲ್ಲುತ್ತೆ? – ವಿಜ್ಞಾನಿಗಳಿಗೆ? ‘ಲಾರ್ಡ್’ ತಿರುಪತಿಗೆ?’: ಚೇತನ್ ಅಹಿಂಸಾ

ಬೆಂಗಳೂರು: ಸದಾ ಒಂದಿಲ್ಲೊಂದು ವಿವಾದಗಳ ಮೂಲಕವೇ ಸುದ್ದಿಯಲ್ಲಿರುವ ನಟ ಚೇತನ್‌ ಅಹಿಂಸಾ ಇದೀಗ ಮತ್ತೊಂದು ವಿವಾದದ ಎಕ್ಸ್‌ ಮಾಡಿದ್ದಾರೆ. ನಟ ಚೇತನ್‌ ಅಹಿಂಸಾ ಚಂದ್ರಯಾನ ಕುರಿತು ಮಾಡಿರುವ ವ್ಯಂಗ್ಯ ಎಕ್ಸ್‌ ಗೆ (ಈ ಹಿಂದೆ ಟ್ವಿಟರ್‌) ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

‘ಚಂದ್ರಯಾನ-3 ಚಂದ್ರನ ಮೇಲೆ ಇಳಿಯುವ ಐತಿಹಾಸಿಕ ಕ್ಷಣವನ್ನು ನೋಡಲು ನನಗೆ ಸಂತೋಷವಾಗಿದೆ. ಈ ಯಶಸ್ಸಿನ ಕೀರ್ತಿ ಯಾರಿಗೆ ಸಲ್ಲುತ್ತದೆ? ನಮ್ಮ ವಿಜ್ಞಾನಿಗಳಿಗೆ? ಅಥವಾ ‘ಲಾರ್ಡ್’ ತಿರುಪತಿಗೆ?’ ಎಂದು ಚೇತನ್ ಅಹಿಂಸಾ ಎಕ್ಸ್‌ ನಲ್ಲಿ ಪ್ರಶ್ನಿಸಿದ್ದಾರೆ. ಇದು ಈಗ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗೆ ಕಾರಣವಾಗಿದ್ದು ಚೇತನ್‌ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಚಂದ್ರಯಾನಕ್ಕೆ ಮುನ್ನ ತಿರುಪತಿಗೆ ಭೇಟಿ ನೀಡಿದ್ದ ಇಸ್ರೊ ತಂಡ:

ಇಸ್ರೋ ಜುಲೈ 14 ರಂದು ಶ್ರೀಹರಿಕೋಟಾದಿಂದ ಚಂದ್ರಯಾನ 3 ಉಪಗ್ರಹ ಉಡಾವಣೆ ಮಾಡಲಾಗಿತ್ತು. ಈ ಉಡಾವಣೆಗೂ ಮೊದಲು ಇಸ್ರೋ ವಿಜ್ಞಾನಿಗಳ ತಂಡ ತಿರುಪತಿ ತಿಪ್ಪಪ್ಪನ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿತ್ತು.

ಇಸ್ರೋದ ಮೂವರು ಮಹಿಳಾ ವಿಜ್ಞಾನಿಗಳು ಹಾಗೂ ಇಬ್ಬರು ಪುರುಷ ವಿಜ್ಞಾನಿಗಳು ತಿಮ್ಮಪ್ಪನ ಸನ್ನಿಧಿಗೆ ಆಗಮಿಸಿ ಯಶಸ್ವಿ ಚಂದ್ರಯಾನಕ್ಕೆ ಪ್ರಾರ್ಥಿಸಿದ್ದರು.

ಈ ವೇಳೆ ಅವರು ತಮ್ಮ ಜತೆ ಉಪಗ್ರಹದ ಚಿಕ್ಕ ಪ್ರತಿಕೃತಿಯನ್ನೂ ತಂದು ದೇವರ ಮುಂದೆ ಇರಿಸಿ ಯಶಸ್ಸಿಗಾಗಿ ಬೇಡಿಕೊಂಡಿದ್ದರು.

ಇನ್ನು, ಇಸ್ರೋ ಮುಖ್ಯಸ್ಥ ಎಸ್‌. ಸೋಮನಾಥ್‌ ಅವರು ತಿರುಪತಿ ಸಮೀಪದ ಸುಲ್ಳೂರುಪೇಟೆಯ ಚೆಂಗಲಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು.

ಈ ಬಗ್ಗೆ ಮಾತನಾಡಿದ ಸೋಮನಾಥ್‌, ‘ಚೆಂಗಲಮ್ಮ ದೇವಿಯ ದರ್ಶನಕ್ಕಾಗಿ ಬಂದಿದ್ದೆ. ಚಂದ್ರಯಾನದ ಯಶಸ್ಸಿಗಾಗಿ ಆಶೀರ್ವಾದ ಬಯಸಿದೆ’ ಎಂದಿದ್ದರು. ಇಸ್ರೋ ವಿಜ್ಞಾನಿಗಳ ಈ ನಡೆ ಭಾರಿ ವಿವಾದಕ್ಕೂ ಕಾರಣವಾಗಿತ್ತು.

Exit mobile version