ನವದೆಹಲಿ: ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ಕೋರಿ ಸಲ್ಲಿಕೆಯಾಗಿದ್ದ 21 ಅರ್ಜಿಗಳನ್ನು ಸಂವಿಧಾನಿಕ ಪೀಠ ವಜಾಗೊಳಿಸಿದ್ದು, ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಮ್ಯಾರಥಾನ್ ವಿಚಾರಣೆ ಪೂರ್ಣಗೊಳಿಸಿದ ಬಳಿಕ ಮೇ 11ರಂದು ತೀರ್ಪು ಕಾಯ್ದಿರಿಸಿತ್ತು.
ಭಿನ್ನಲಿಂಗೀಯ ದಂಪತಿ ಮಾತ್ರ ಉತ್ತಮ ಪೋಷಕರಾಗಬಹುದು ಎಂದು ಕಾನೂನು ಹೇಳುವುದಿಲ್ಲ ಎಂದು ಸಿಜೆಐ ಡಿವೈ ಚಂದ್ರಚೂಡ್ ಹೇಳಿದ್ದಾರೆ. ವಿಶೇಷ ವಿವಾಹ ಕಾಯ್ದೆ ವಿಷಯವನ್ನು ಸಂಸತ್ತು ನಿರ್ಧರಿಸಬೇಕು, ವಿಶೇಷ ವಿವಾಹ ಕಾಯ್ದೆ ಸೆಕ್ಷನ್ 4 ಅನ್ನು ರದ್ದುಪಡಿಸಿದರೆ ಪ್ರಗತಿಪರ ಶಧಾಸನದ ಪ್ರಯೋಜನಗಳನ್ನು ಕಳೆದುಕೊಳ್ಳಬೇಕಾಗುವ ಅಪಾಯವೂ ಇದೆ ಎಂದಿದ್ದಾರೆ. ವ್ಯಕ್ತಿಯ ಲಿಂಗವು ಲೈಂಗಿಕತೆಗೆ ಸಮನಾದುದ್ದಲ್ಲ, ಒಬ್ಬರ ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ವಿಷಯವು ಸಂವಿಧಾನದ 21ನೇ ವಿಧಿಯಲ್ಲಿ ಒಬ್ಬರ ಬದುಕು ಮತ್ತು ಸ್ವಾತಂತ್ರ್ಯದ ಹಕ್ಕಿಗೆ ಸಂಬಂಧಿಸಿದ್ದಾಗಿದೆ ಎಂದು ಪೀಠ ಹೇಳಿದೆ. ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರಿದ್ದ ಪಂಚಪೀಠವು ಈ ತೀರ್ಪು ನೀಡಿದೆ.