ಕೇಸರಿ ಅಂದಾಕ್ಷಣ ಅದು ಕಾಶ್ಮೀರದಲ್ಲಿ ಮಾತ್ರ ಬೆಳೆಯುತ್ತಾರೆ ಅನ್ನೋ ಮಾತಿದೆ. ಯಾಕಂದ್ರೆ ಕೇಸರಿ ಬೆಳೆಯಲು ಸೂಕ್ತ ವಾತಾವರಣ ಇರೋದು ಕಾಶ್ಮೀರ ಹಾಗೂ ಇರಾನ್ ನಲ್ಲಿ ಮಾತ್ರ ಹಾಗಾಗಿ ಮಾರುಕಟ್ಟೆಯಲ್ಲಿ ಕಾಶ್ಮೀರ ಮತ್ತು ಇರಾನ್ ಕೇಸರಿ ಮಾತ್ರವೇ ಲಭ್ಯವಾಗುತ್ತಿದೆ. ಆದರೆ ಅಸಾಧ್ಯ ಎನ್ನುವಂತೆ ಕೋಲಾರದ ಸಾವಯವ ಕೃಷಿಕ ಹಾಗೂ ಕೃಷಿ ವಿಜ್ಞಾನಿ ಲೋಕೇಶ್ ಅವರು ಬಯಲು ಸೀಮೆ ಕೋಲಾರದಲ್ಲಿ ಕೇಸರಿ ಬೆಳೆ ಬೆಳೆಯುವ ಮೂಲಕ ಯಶಸ್ವಿಯಾಗಿದ್ದಾರೆ.
ಲೋಕೇಶ್ ಅವರು ತಮ್ಮ ಮನೆಯ ಒಂದು ಕೊಠಡಿಯಲ್ಲಿ ಕೇಸರಿ ಬೆಳೆಯಲು ಬೇಕಾಗುವ ವಾತಾವರಣವನ್ನು ನಿರ್ಮಾಣ ಮಾಡಿಕೊಂಡು ಅಲ್ಲಿ ಕೇಸರಿ ಬೆಳೆದು ಯಶಸ್ವಿಯಾಗಿದ್ದಾರೆ. ತಮ್ಮ ಮನೆಯ ಒಂದು ಕೊಠಡಿಯಲ್ಲಿ ಕಾಶ್ಮೀರದ ರೀತಿಯಲ್ಲಿರುವ ಹವಾನಿಯಂತ್ರಿತ ಕೊಠಡಿ ಸೃಷ್ಟಿಮಾಡಿಕೊಂಡು ನಂತರ ಕಾಶ್ಮೀರದಿಂದ ಕೇಸರಿ ಗಡ್ಡೆಗಳನ್ನು ತರಿಸಿಕೊಂಡು ಕೇಸರಿ ಬೆಳೆ ಬೆಳೆಯಲು ನಿರ್ಧರಿಸಿ ಪ್ರಾಯೋಗಿಕವಾಗಿ ಇದನ್ನು ಬೆಳೆದಿದ್ದಾರೆ. ಸುಮಾರು ಹತ್ತು ಸಾವಿರ ರೂಪಾಯಿಗೆ ಕೇಸರಿ ಗಡ್ಡೆಗಳನ್ನು ತರಿಸಿಕೊಂಡು ಅದನ್ನು ಹವಾನಿಯಂತ್ರಿತ ಕೊಠಡಿಯಲ್ಲಿ ಇಂಡೋರ್ ಫಾರ್ಮಿಂಗ್ ಮಾಡಿದ್ರು.
ಈ ವೇಳೆ ಅವರಿಗೆ ಮೊದಲ ಬಿತ್ತನೆಯಲ್ಲೇ ಸುಮಾರು 20 ಗ್ರಾಂ ಕೇಸರಿ ಸಿಕ್ಕಿದೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ಗ್ರಾಂ ಕೇಸರಿಗೆ 1000-1500 ರೂ ಬೆಲೆ ಇದೆ. ಹಾಗಾಗಿ ಲೋಕೇಶ್ ಅವರಿಗೆ ಹತ್ತು ಸಾವಿರಕ್ಕೆ ಹತ್ತು ಸಾವಿರ ಲಾಭ ಸಿಕ್ಕಿದೆ.ಅಲ್ಲದೆ ಕೇಸರಿ ಗಡ್ಡೆಗಳು ಒಮ್ಮ ಬಿತ್ತನೆಮಾಡಿದ್ರೆ ಅದು ಜೀವನ ಪರ್ಯಂತ ಹೂ ಬಿಡುತ್ತದೆ ಅಲ್ಲದೆ ಗಡ್ಡೆಗಳು ಸಹ ಹೆಚ್ಚಾಗುತ್ತದೆ ಹಾಗಾಗಿ ಅವರಿಗೆ ಪ್ರತಿವರ್ಷ ನಿರೀಕ್ಷೆಗೂ ಮೀರಿದ ಲಾಭ ಸಿಗುತ್ತದೆ ಅನ್ನೋದು ಲೋಕೇಶ್ ಅವರ ಮಾತು.
ಇನ್ನು ಮಾರುಕಟ್ಟೆಯಲ್ಲಿ ಕಾಶ್ಮೀರ ಕೇಸರಿ ಹಾಗೂ ಇರಾನ್ ಕೇಸರಿ ಮಾತ್ರ ಸಿಗುತ್ತದೆ ಒಂದು ಕೆಜಿ ಕೇಸರಿಗೆ ಐದರಿಂದ-ಹತ್ತು ಲಕ್ಷದವರೆಗೆ ಬೆಲೆ ಇದೆ. ಕೇಸರಿ ಸದ್ಯ ಪ್ರತಿ ವರ್ಷ 100 ಟನ್ ಬೇಡಿಕೆ ಇದ್ದು, ಸದ್ಯ 3.8 ಟನ್ ಮಾತ್ರ ಕೇಸರಿ ಉತ್ಪಾದನೆಯಾಗುತ್ತಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ಕೇಸರಿಗೆ ಬೇಡಿಕೆ ಹೆಚ್ಚಿದೆ. ಹಾಗಾಗಿ ಕೇಸರಿ ಬೆಳೆ ಅತ್ಯಂತ ಲಾಭದಾಯ ಅನ್ನೋದು ಲೋಕೇಶ್ ಅವರ ಮಾತು. ಇದರ ಜೊತೆಗೆ ಲೋಕೇಶ್ ತಮ್ಮ ಪ್ರಯೋಗಾಲಯದಲ್ಲಿ ಅತ್ಯಂತ ದುಬಾರಿ ಬೆಲೆಯ ಬ್ರೆಜಿಲ್ ಆಲೂಗಡ್ಡೆ ಕೂಡಾ ಬೆಳೆದಿದ್ದಾರೆ.
ಬ್ರೆಜಿಲ್ ಬ್ಲೂ ಆಲೂಗಡ್ಡೆ ಸದ್ಯ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ 800 ಕೋಟಿ ರೂಪಾಯಿ ಬೆಲೆ ಇದೆ. ಅದನ್ನು ಸದ್ಯ ಬಿತ್ತನೆ ಬೀಜ ಮಾಡುವ ಹಂತದಲ್ಲಿದ್ದು ಬ್ರೆಜಿಲ್ ಆಲೂಗಡ್ಡೆ ಬೆಳೆಯುವಲ್ಲಿಯೂ ಲೋಕೇಶ್ ಯಶಸ್ವಿಯಾಗಿದ್ದಾರೆ. ಅದರ ಜೊತೆಗೆ ಕಾರ್ಡಿಸೆಪ್ಸ್ ಅನ್ನೋ ಮಶ್ರೂಮ್ ಅಂದರೆ ಹಣಬೆಯನ್ನು ಲೋಕೇಶ್ ಬೆಳೆ ಬೆಳೆದು ಯಶಸ್ವಿಯಾಗಿದ್ದಾರೆ. ಕಾರ್ಡಿಸೆಪ್ಸ್ ಮಶ್ರೂಮ್ ಒಂದು ಕೆಜಿಗೆ 3.5 ಲಕ್ಷ ರೂಪಾಯಿ ಇದೆ ಇದನ್ನು ನ್ಯಾಚುರಲ್ ವಯಾಗ್ರ ಎಂದು ಕರೆಯುತ್ತಾರೆ.ಈ ಮಶ್ರೂಮ್ನ್ನು ಹೆಚ್ಚಾಗಿ ಬಾಡಿ ಬಿಲ್ಡರ್ ಗಳು ಹಾಗೂ ಔಷಧಗಳ ತಯಾರಿಕೆಗೆ ಹೆಚ್ಚಾಗಿ ಬಳಸುತ್ತಾರೆ ಹಾಗಾಗಿ ಇದೂ ಕೂಡಾ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಇದ್ದು ಇದನ್ನು ಲೋಕೇಶ್ ಅವರು ತಮ್ಮ ಪ್ರಯೋಗಾಲಯದಲ್ಲಿ ಬೆಳೆಯುವ ಮೂಲಕ ಯಶಸ್ವಿಯಾಗಿದ್ದಾರೆ.