ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ವಿದೇಶದಿಂದ ಅಕ್ರಮವಾಗಿ ಗೋಲ್ಡ್ ಸ್ಮಗ್ಲಿಂಗ್ ಮಾಡ್ತಿದ್ದ ಮೂವರು ಮಹಿಳೆಯರನ್ನು ಬಂಧಿಸಿದ್ದಾರೆ. ಕೆಂಪೇಗೌಡ ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳು ಮೂರು ಪ್ರತ್ಯೇಕ ಪ್ರಕರಣಗಳಲ್ಲಿ 67 ಲಕ್ಷ 57 ಸಾವಿರದ 923 ರೂ ಮೌಲ್ಯದ 1 ಕೆಜಿ 133 ಗ್ರಾಂ ಬಂಗಾರ ವಶಕ್ಕೆ ಪಡೆದಿದ್ದಾರೆ. ಗೋಲ್ಡ್ ಸ್ಮಗ್ಲಿಂಗ್ ಮಾಡಲು ಆರೋಪಿಗಳು ಎಷ್ಟೇ ಖತರ್ನಾಕ್ ಪ್ಲಾನ್ ಮಾಡಿದರೂ ಕಸ್ಟಮ್ಸ್ ಅಧಿಕಾರಿಗಳು ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶುಕ್ರವಾರ ತಡರಾತ್ರಿ ಹಾಗೂ ಶನಿವಾರ ಮುಂಜಾನೆ ನಡುವೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮೂವರು ಮಹಿಳೆಯರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಕ್ವಾಲಲಂಪುರದಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದ ಭಾರತೀಯ ಮೂಲದ ಮಹಿಳೆಯೊಬ್ಬರು ತಮ್ಮ ಬ್ಲೌಸ್ನಲ್ಲಿ 300.95 ಗ್ರಾಂ ಚಿನ್ನದ ಪೇಸ್ಟ್ ಅಂಟಿಸಿಕೊಂಡಿದ್ದರು. ಇದನ್ನು ನೋಡಿ ತಪಾಸಣಾ ಅಧಿಕಾರಿಗಲೇ ಶಾಕ್ ಆಗಿದ್ದು ಇಂಚಿಂಚೂ ಚೆಕ್ ಮಾಡಿ ಚಿನ್ನ ವಶಕ್ಕೆ ಪಡೆದಿದ್ದಾರೆ. ಈ ಮಹಿಳೆಯಿಂದ ಸುಮಾರು 17.9 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ಮತ್ತೊಂದು ಪ್ರಕರಣದಲ್ಲಿ ಮಲೇಷ್ಯಾ ಮೂಲದ ಮಹಿಳೆಯನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಈಕೆ ಗುದದ್ವಾರದಲ್ಲಿ ನಾಲ್ಕು ಕ್ಯಾಪ್ಸೂಲ್‌ಗಳಲ್ಲಿ ಒಟ್ಟು 578.27 ಗ್ರಾಂ ಚಿನ್ನವನ್ನು ಅಡಗಿಸಿಟ್ಟುಕೊಂಡಿದ್ದಳು. ಸದ್ಯ ವೈದ್ಯರ ಸಹಾಯದಿಂದ ಗುದದ್ವಾರದಲ್ಲಿದ್ದ ಚಿನ್ನವನ್ನು ಹೊರತೆಗೆದು ವಶಕ್ಕೆ ಪಡೆಯಲಾಗಿದೆ. ಈ ಮಹಿಳೆಯಿಂದ ಸುಮಾರು 34.4 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೋರ್ವ ಮಹಿಳೆ ಕುವೈತ್‌ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದು ಭಾರತೀಯ ಮೂಲದವರು. ಇವರು ಚಿನ್ನವನ್ನು ಸಣ್ಣ ಸಣ್ಣದಾಗಿ ತುಂಡು ಮಾಡಿ, ಗೋಡಂಬಿ, ಬಾದಾಮಿ, ಪಿಸ್ತಾವನ್ನು ಒಳಗೊಂಡಿದ್ದ ಡ್ರೈ ಫ್ರೂಟ್ಸ್ ಪ್ಯಾಕೆಟ್ನಲ್ಲಿ ಸೇರಿಸಿದ್ದರು. ತಪಾಸಣೆಯ ವೇಳೆ ಡ್ರೈ ಫ್ರೂಟ್ಸ್ ಪ್ಯಾಕೇಟ್ನಲ್ಲಿ ಚಿನ್ನದ ಸಣ್ಣ ಸಣ್ಣ ತುಂಡುಗಳು ಇರುವುದು ಕಂಡು ಬಂದಿದೆ. ಈ ಮಹಿಳೆಯಿಂದ 15.26 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ. ಹಾಗೂ 1.49 ಲಕ್ಷ ರೂ. ಮೌಲ್ಯದ ಐ ಪೋನ್ 14 ಪ್ರೋ ಮ್ಯಾಕ್ ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಸದ್ಯ ಮೂವರು ಮಹಿಳೆಯರನ್ನು ಬಂಧಿಸಿ ವಿಚಾರನೆ ನಡೆಸಲಾಗುತ್ತಿದೆ.