ನವದೆಹಲಿ: ಬುಧವಾರದಂದು (ಆ.23) ಇಸ್ರೋ ಹಾರಿಬಿಟ್ಟಿದ್ದ ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವ ಭಾಗದಲ್ಲಿ ಸಾಫ್ಟ್ ಲ್ಯಾಂಡಿಂಗ್ ಆಗುವ ಮೂಲಕ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲನ್ನು ಸಾಧಿಸಿದೆ.
ಇದೀಗ ವಿಕ್ರಂ ಲ್ಯಾಂಡರ್ ನೊಳಗಿದ್ದ ಪ್ರಗ್ಯಾನ್ ರೋವರ್ ಚಂದಿರನ ಅಂಗಳಕ್ಕೆ ಕಾಲಿಟ್ಟಿದ್ದು, ಅದು ಅಲ್ಲಿ ಮುಂದಿನ 14 ದಿನಗಳ ಕಾಲ (ಭೂಮಿಯ ಕಾಲಮಾನ) ಸುತ್ತಾಡಿ ವಿವಿಧ ಮಾಹಿತಿಗಳನ್ನುಕಲೆಹಾಕಲಿದೆ.
ಇದೀಗ ಈ ಪ್ರಗ್ಯಾನ್ ರೋವರ್ ಸುತ್ತು ಹಾಕುವ ಕಡೆಗಳಲ್ಲಿ ನಮ್ಮ ರಾಷ್ಟ್ರೀಯ ಲಾಂಛನ ಮತ್ತು ಇಸ್ರೋ ಲೋಗೋ ಗುರುತನ್ನು ಚಂದಿರನ ನೆಲದಲ್ಲಿ ಇದು ಪಡಿಮೂಡಿಸಲಿದೆ.
ಈ ಮೂಲಕ ಚಂದಿರನ ಈ ಭಾಗದಲ್ಲಿ ಭಾರತದ ಸಾಧನೆಯ ನೆನಪು ಶಾಶ್ವತವಾಗಿ ಉಳಿಯುವಂತಹ ಕಾರ್ಯವನ್ನು ಇಸ್ರೋ ಹಾರಿಬಿಟ್ಟ ವಿಕ್ರಂ ಲ್ಯಾಂಡರ್ ಒಳಗಿದ್ದ ಕಾಫಿ ಟೇಬಲ್ ಗಾತ್ರದ ಪ್ರಗ್ಯಾನ್ ರೋವರ್ ಮಾಡಲಿದೆ.
ಚಂದ್ರಯಾನ-3ರ ಉಡ್ಡಯನಕ್ಕೂ ಮೊದಲು ಇಸ್ರೋ ಬಿಡುಗಡೆ ಮಾಡಿದ್ದ ವಿಡಿಯೋ (ಕರ್ಟನ್ ರೈಸರ್) ಒಂದರಲ್ಲಿ ರೋವರ್ ನಲ್ಲಿ ಈ ಎರಡು ಲೋಗೋಗಳು ಪಡಿಮೂಡಿಸುವಿಕೆಯನ್ನು ತೋರಿಸಲಾಗಿತ್ತು.
ಈ ವಿಡಿಯೋದಲ್ಲಿ ತೋರಿಸಲಾಗಿರುವಂತೆ, ಚಂದಿರನ ನೆಲದಲ್ಲಿ ರೋವರ್ ಚಲಿಸುತ್ತಿರುವಂತೆ ಅದರ ಹಿಂಭಾಗದ ಎರಡೂ ಚಕ್ರಗಳು, ನಮ್ಮ ರಾಷ್ಟ್ರ ಲಾಂಛನವಾಗಿರುವ ಮೂರು ಸಿಂಹಗಳು ಮತ್ತು ಇಸ್ರೋದ ಲೋಗೋವನ್ನು ಆ ಪ್ರದೇಶದಲ್ಲಿ ಅಚ್ಚುಹಾಕಲಿದೆ.