Site icon newsroomkannada.com

ಹೋಟೆಲ್ ಬ್ಯುಸಿನೆಸ್ ಮಾಡಿ ಎಂದು ಟೆಕ್ಕಿಗೆ ವಂಚಿಸಿದ ರೋಹಿಣಿ ಸಿಯಾ

ರೋಹಿಣಿ ವಂಚನೆಯ ರೋಚಕ ಬಲೆ ಹೇಗಿತ್ತು ಗೊತ್ತಾ?

ಬಳ್ಳಾರಿ: ವರ್ಕ್ ಪ್ರಮ್ ಹೋಂ ಜಾಬ್ (work from home job) ಹೆಸರಲ್ಲಿ ಬಳ್ಳಾರಿಯ ಐಟಿ ಉದ್ಯೋಗಿಯೊಬ್ಬರಿಗೆ (IT Employee) 4.33 ಲಕ್ಷ ರೂ. ವಂಚಿಸಲಾಗಿದೆ. ಹೋಟೆಲ್‌ ಕಂಪನಿಯೊಂದರ ಹೆಸರಿನಲ್ಲಿ ಹೀಗೆ ವಂಚನೆ (Fraud case) ಮಾಡಲಾಗಿದೆ.
ಬಳ್ಳಾರಿಯ ರವಿ ಎಂಬ ಯುವಕನಿಗೆ ಹೀಗೆ 4.33 ಲಕ್ಷ ದೋಖಾ ನಡೆದಿದೆ. ಮನೆಯಲ್ಲೇ ಕುಳಿತು ಹೋಟೆಲ್ ಬ್ಯುಸಿನೆಸ್ ಮಾಡಿ ಹಣ ಸಂಪಾದಿಸಿ ಎಂದು ಯುವಕನಿಗೆ ವಾಟ್ಸ್‌ಅ್ಯಪ್ ಮೆಸೇಜ್ ಬಂದಿತ್ತು. ಇದನ್ನು ನಂಬಿ ಮುಂದುವರಿದ ಯುವಕ, ಹಣ ಕಳೆದುಕೊಂಡಿದ್ದಾನೆ.

ಟೆಲಿಗ್ರಾಂ ಆಪ್‌ ಮೂಲಕ ವಂಚಕರು ಕಾರ್ಯಾಚರಿಸಿದ್ದಾರೆ. ರೋಹಿಣಿ ಸಿಯಾ ಎಂಬ ಹೆಸರಿನಿಂದ ಮಹಿಳೆಯೊಬ್ಬಳು ಮೋಸ ಎಸಗಿದ್ದಾಳೆ. ಹೋಟೆಲ್ ಕಂಪನಿ ಹೆಸರಿನಲ್ಲಿ ಟಾಸ್ಕ್‌ ಕೊಟ್ಟು ಹ‌ಂತ ಹಂತವಾಗಿ ಲಕ್ಷ ಲಕ್ಷ ಹಣ ಪೀಕಲಾಗಿದೆ. ದುರದೃಷ್ಟವಂತ ಯುವಕ ಒಂದೇ ದಿನದಲ್ಲಿ 4,33,000 ರೂ. ಹಣ ಕಳೆದುಕೊಂಡಿದ್ದಾನೆ.

ವಾಟ್ಸ್‌ಆಪ್‌ನಿಂದ ಬಂದ ಮೆಸೇಜ್‌ ಮೂಲಕ ಟೆಲಿಗ್ರಾಂ‌ಂನಲ್ಲಿದ್ದ ಬಿಸಿನೆಸ್ ಗ್ರೂಪ್‌ಗೆ ಯುವಕ ಸೇರಿದ್ದಾನೆ. ಟಿಲಿಗ್ರಾಂ‌ಂನಲ್ಲಿ ಟಾಸ್ಕ್ ಕೊಟ್ಟ ವಂಚಕರು, ಮನೆಯಿಂದಲೇ ಕೆಲಸ ಮಾಡಿ ಎಂದು ಪ್ರಚೋದಿಸಿದ್ದಾರೆ. ತಮ್ಮ ಕಂಪನಿಗೆ ರೇಟಿಂಗ್ ಮತ್ತು ರಿವ್ಯೂ ಕೊಟ್ರೆ ನಿತ್ಯ 6000 ರೂ. ನೀಡುವುದಾಗಿ ಲಾಭದ ಭರವಸೆ ನೀಡಿದ್ದಾರೆ. ಟಾಸ್ಕ್‌ ಕಂಪ್ಲೀಟ್‌ ಮಾಡಲು, ತೆರಿಗೆ ವೆಚ್ಚ ಇತ್ಯಾದಿ ಎಂದು ಯುಪಿಐ ಮೂಲಕ ಮೂರು ಬ್ಯಾಂಕ್ ಖಾತೆಗಳಿಗೆ 4.33 ಲಕ್ಷ ಪಡೆದುಕೊಂಡಿದ್ದಾರೆ.

ಲಾಭಾಂಶ ಪಡೆಯಬೇಕಾದರೆ ಮತ್ತೆ 1.80 ಲಕ್ಷ ʼತೆರಿಗೆʼ ನೀಡುವಂತೆ ರವಿಗೆ‌ ಸೂಚನೆ ನೀಡಿದ್ದಾರೆ. ಉದ್ಯೋಗವೂ ಇಲ್ಲದೆ, ಹಣವೂ ಇಲ್ಲದೆ ಕಂಗಾಲಾದ IT ಉದ್ಯೋಗಿ ರವಿ, ಇದೀಗ ಮೋಸದ ಕುರಿತು ಬಳ್ಳಾರಿ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.
ಸೈಬರ್ ಖದೀಮರು ಕಳೆದ ಒಂದು ವರ್ಷದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿಯೇ 3 ಕೋಟಿ ರೂ. ಹಣ ಗುಳುಂ ಮಾಡಿದ್ದಾರೆ ಎನ್ನಲಾಗಿದೆ. ಮನೆಯಿಂದಲೇ ಕೆಲಸ ಮಾಡಿ ಹಣ ಗಳಿಸುವ ಆಕರ್ಷಕ ಆಫರ್‌ ಅನ್ನು ನಂಬಿ ಆನ್‌ಲೈನ್‌ನಲ್ಲಿ ಮುಂದುವರಿಯಬಾರದು ಎಂದು ಸೈಬರ್‌ ಪೊಲೀಸರು ಸೂಚನೆ ನೀಡಿದ್ದಾರೆ.

Exit mobile version