ಬಂಟ್ವಾಳ: ಕರಾವಳಿಯಲ್ಲಿ ಭಾರಿ ಮಳೆಯಾಗುತ್ತಿದ್ದು , ಗುಡ್ಡ ಜರಿದು ಕಲ್ಲು ಬಂಡೆ ಸಹಿತ ಮಣ್ಣು ರಸ್ತೆಗೆ ಬಿದ್ದ ಪರಿಣಾಮ ಸಾರ್ವಜನಿಕ ರಸ್ತೆ ಸಂಪೂರ್ಣ ಬಂದ್ ಆಗಿರುವ ಘಟನೆ ಬುಧವಾರ ಬೆಳಿಗ್ಗೆ ಲೊರೊಟ್ಟೊ ಎಂಬಲ್ಲಿ ನಡೆದಿದೆ. ಬಂಟ್ವಾಳ ಸಮೀಪದ ಅಮ್ಟಾಡಿ ಗ್ರಾ.ಪಂ.ವ್ಯಾಪ್ತಿಯ ಲೊರೆಟ್ಟೊ ಮಹಲ್ ತೋಟ ಎಂಬಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಲೊರೊಟ್ಟೊ ಜಂಕ್ಷನ್ ನಿಂದ ಮಹಲ್ ತೋಟ ಎಂಬ ಹಳ್ಳಿಯೊಂದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ರಸ್ತೆ ಬದಿಯಲ್ಲಿರುವ ಗುಡ್ಡ ಜರಿದು ಬಿದ್ದಿದೆ. ಮಣ್ಣಿನ ಜೊತೆ ಬೃಹತ್ ಗಾತ್ರದ ಅಪಾಯಕಾರಿ ಕಲ್ಲುಬಂಡೆಗಳು ಉರುಳಿ ಬಿದ್ದು ರಸ್ತೆಗೆ ಹಾನಿಯಾಗುವುದರ ಜೊತೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕಳೆದ ಕೆಲವು ದಿನಗಳಿಂದ ಸುರಿಯುವ ಗಾಳಿ ಮಳೆಗೆ ನಿತ್ಯ ಪ್ರಾಕೃತಿಕ ವಿಕೋಪಗಳು ಉಂಟಾಗುತ್ತಿದ್ದು, ತಾಲೂಕಿನ ಅನೇಕ ಕಡೆಗಳಲ್ಲಿ ಮನೆ,ಮರ,ಗುಡ್ಡ ಹೀಗೆ ಪಾಕೃತಿಕ ಹಾನಿಯಾಗಿ ಲಕ್ಷಾಂತರ ರೂ.ನಷ್ಟ ಸಂಭವಿಸಿದೆ.