ಬಂಟ್ವಾಳ: ಶಂಭೂರು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ನೇತ್ರಾವತಿ ನದಿ ನೀರಿಗೆ ಬಿದ್ದು ಬೆಳ್ತಂಗಡಿ ಮೂಲದ ಯುವಕ ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ.
ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಮಂಜೊಟ್ಟಿ ನಿವಾಸಿ ಲೋಹಿತಾಶ್ವ (30) ಮೃತರು. ಅವರು ಕಾರಿನಲ್ಲಿ ಊರಿನ ನಾಲ್ವರು ಸ್ನೇಹಿತರಾದ ವಿನ್ಸೆಂಟ್, ಮ್ಯಾಕ್ಸಿಮ್, ಪ್ರಮೋದ್, ದಯಾನಂದ ಅವರ ಜತೆ ಶಂಭೂರಿಗೆ ಬಂದಿದ್ದು, ಸ್ನೇಹಿತರು ಸ್ನಾನ ಮಾಡುವುದಕ್ಕೆ ನೀರಿಗೆ ಇಳಿದಿದ್ದು, ಆದರೆ ಇವರು ನದಿ ಕಿನಾರೆಯಲ್ಲೇ ಕುಳಿತ್ತಿದ್ದರು ಎನ್ನಲಾಗಿದೆ. ಆದರೆ ಸ್ನೇಹಿತರು ಸ್ನಾನ ಮುಗಿಸಿ ಬರುವ ವೇಳೆ ಲೋಹಿತಾಶ್ವ ಅವರು ನೀರಿನಲ್ಲಿ ಬಿದ್ದಿದ್ದರು.
ನದಿ ಕಿನಾರೆಯಲ್ಲಿ ಕುಳಿತಿದ್ದ ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದು ನೀರಿಗೆ ಬಿದ್ದಿರುವ ಸಾಧ್ಯತೆಯ ಕುರಿತು ಸಂಶಯಿಸಲಾಗಿದ್ದು, ಕೈಯಲ್ಲಿ ವಾಚ್ ಇದ್ದು, ಬಟ್ಟೆಯನ್ನೂ ಧರಿಸಿದ್ದರು. ಅವರೂ ಸ್ನಾನಕ್ಕೆ ಇಳಿದಿದ್ದರೆ ಅದನ್ನು ಕಳಚಿರುತ್ತಿದ್ದರು. ಬಿದ್ದಿರುವ ರಭಸಕ್ಕೆ ಅವರ ತಲೆಯ ಭಾಗಕ್ಕೆ ಗಾಯವಾಗಿದೆ.
ಲೋಹಿತಾಶ್ವ ಅವರು ಎಲೆಕ್ಟ್ರಿಕಲ್ ಗುತ್ತಿಗೆ ಕೆಲಸ ಮಾಡುತ್ತಿದ್ದು, ಅವರ ಸ್ನೇಹಿತರು ಲೋಹಿತಾಶ್ವ ಹಿಂದೆ ಕೆಲಸ ಮಾಡುತ್ತಿದ್ದ ವಿದ್ಯುತ್ ಗುತ್ತಿಗೆ ಸಂಸ್ಥೆಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಸೋಮವಾರ ರಜೆ ಇದ್ದ ಹಿನ್ನೆಲೆಯಲ್ಲಿ ಅವರಲ್ಲೊಬ್ಬನ ಪತ್ನಿಯ ಮನೆ ಶಂಭೂರಿನಲ್ಲಿದ್ದ ಹಿನ್ನೆಲೆ ಅಲ್ಲಿಗೆ ತೆರಳಿದ್ದರು. ಬಂಟ್ವಾಳ ಗ್ರಾಮಾಂತರ ಪೊಲೀಸ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಲೋಹಿತಾಶ್ವ ಮನೆಯ ಆಧಾರಸ್ತಂಭವಾಗಿದ್ದು, ಒಂದು ವರ್ಷದ ಹಿಂದಷ್ಟೇ ಅವರಿಗೆ ವಿವಾಹವಾಗಿತ್ತು. ಮನೆಯಲ್ಲಿ ತಾಯಿ ಹಾಗೂ ಪತ್ನಿಯ ಜತೆ ವಾಸಿಸುತ್ತಿದ್ದರು. ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದ ಅವರು ಬಳಿಕ ಊರಿಗೆ ಆಗಮಿಸಿ ಕೆಲಸದವರನ್ನು ಇಟ್ಟುಕೊಂಡು ಎಲೆಕ್ಟ್ರಿಕಲ್ ಗುತ್ತಿಗೆ ವಹಿಸಿಕೊಂಡು ಕೆಲಸ ಮಾಡುತ್ತಿದ್ದರು.