ಸಿಯೋಲ್: ವೆಜಿಟೇರಿಯನ್ ಮೀಟ್ ಅಥವಾ ಸಸ್ಯಾಹಾರಿ ಮಾಂಸ ಅಭಿವೃದ್ಧಿಪಡಿಸಿರುವ ವಿಜ್ಞಾನಿಗಳು (Scientists) ಈಗ ಗೋಮಾಂಸದಿಂದ (Beef) ಅಕ್ಕಿಯನ್ನು ತಯಾರಿಸಿದ್ದಾರೆ! ಇದನ್ನು ಮಾಂಸದ ಅಕ್ಕಿ ಎಂದೂ ಕರೆಯಲಾಗುತ್ತಿದೆ. ದಕ್ಷಿಣ ಕೊರಿಯಾದ (South Korea) ವಿಜ್ಞಾನಿಗಳು ಇದನ್ನು ಸಿದ್ಧಪಡಿಸಿದ್ದು, ಹಲವು ವೈಶಿಷ್ಟ್ಯಗಳನ್ನೂ ಪಟ್ಟಿ ಮಾಡಿದ್ದಾರೆ. ಈ ಬಗ್ಗೆ ಸಂಶೋಧನೆ ನಡೆಸುತ್ತಿರುವ ಸಿಯೋಲ್‌ನ ‘ಯೋನ್ಸೆ ವಿಶ್ವವಿದ್ಯಾಲಯ’ದ ವಿಜ್ಞಾನಿಗಳು, ಮಾಂಸಭರಿತ ಅಕ್ಕಿ ಆಹಾರದ ಕೊರತೆಯನ್ನು ಕಡಿಮೆ ಮಾಡುತ್ತದೆ ಮತ್ತು ಹವಾಮಾನ ಬದಲಾವಣೆಯ ಸವಾಲುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಹೈಬ್ರಿಡ್ ಅಕ್ಕಿಯು ಪರಿಸರವನ್ನು ಸುರಕ್ಷಿತವಾಗಿ ಇರಿಸುವುದರೊಂದಿಗೆ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ದಕ್ಷಿಣ ಕೊರಿಯಾದ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಹೈಬ್ರಿಡ್ ಅಕ್ಕಿಯನ್ನು ಹೇಗೆ ತಯಾರಿಸಲಾಗುತ್ತದೆ ಮತ್ತು ಇದು ಸಾಮಾನ್ಯ ಅಕ್ಕಿಗಿಂತ ಎಷ್ಟು ಭಿನ್ನವಾಗಿದೆ ಎಂಬ ಮಾಹಿತಿಯನ್ನೂ ಅವರು ನೀಡಿದ್ದಾರೆ.
ಈ ವಿಶೇಷ ಅಕ್ಕಿಯನ್ನು ತಯಾರಿಸಲು ದನದ ಮಾಂಸದಲ್ಲಿರುವ ಕೋಶಗಳನ್ನು ಬಳಸಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಅಕ್ಕಿ ಆಹಾರದ ಪ್ರಮುಖ ಮೂಲವಾಗಿದೆ. ಇದು ಪೋಷಕಾಂಶಗಳ ಆಗರವೂ ಆಗಿದೆ. ಈಗ ಗೋಮಾಂಸದಿಂದ ಅಕ್ಕಿ ತಯಾರಿಸಿ ಅದರ ಪೋಷಕಾಂಶಗಳನ್ನು ಹೆಚ್ಚಿಸುವ ಕೆಲಸ ನಡೆದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
‘ಮ್ಯಾಟರ್ ಜರ್ನಲ್’ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಗೋಮಾಂಸದ ಅಕ್ಕಿಯನ್ನು ತಯಾರಿಸಲು ಗೋಮಾಂಸದ ಕೋಶಗಳು ಮತ್ತು ಫಿಶ್ ಜೆಲಾಟಿನ್ಗಳನ್ನು ಬಳಸಲಾಗಿದೆ. ಅಕ್ಕಿ ತಯಾರಿಕೆಯ ಸಂಪೂರ್ಣ ಪ್ರಕ್ರಿಯೆಯು ಪ್ರಯೋಗಾಲಯದಲ್ಲಿ 11 ದಿನಗಳಲ್ಲಿ ಪೂರ್ಣಗೊಂಡಿದೆ.
ಆರ್ಥಿಕ ದೃಷ್ಟಿಕೋನದಿಂದ ಕೂಡ ಈ ಅಕ್ಕಿ ಉತ್ತಮವೆಂದು ಸಂಶೋಧನೆ ಹೇಳಿಕೊಂಡಿದೆ. ಇದು ಮಾರುಕಟ್ಟೆಯಲ್ಲಿ ಲಭ್ಯವಾದರೆ, ಸಾಮಾನ್ಯ ಧಾನ್ಯಗಳಿಗಿಂತ ಅಗ್ಗವಾಗಿ ಸಿಗಬಹುದು ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ಇದು ಕೊರಿಯನ್ ಜನರಿಗೆ ಉತ್ತಮ ಆಯ್ಕೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಾಮಾನ್ಯವಾಗಿ, ಒಂದು ಕೆಜಿ ಗೋಮಾಂಸದ ಬೆಲೆ 15 ಡಾಲರ್ ಅಂದರೆ ಅಂದಾಜು 1,244 ರೂಪಾಯಿಗಳು. ಆದರೆ ಗೋಮಾಂಸದಿಂದ ಮಾಡಿದ ಅಕ್ಕಿಯನ್ನು 2.23 ಡಾಲರ್‌ಗಳಿಗೆ ಅಂದರೆ ಕೆಜಿಗೆ ಅಂದಾಜು 185 ರೂಪಾಯಿಗಳಿಗೆ ಖರೀದಿಸಬಹುದಾಗಿದೆ ಎಂದು ‘ಮ್ಯಾಟರ್ ಜರ್ನಲ್’ ವರದಿ ಉಲ್ಲೇಖಿಸಿದೆ.