main logo

‘ಕಿಲ್ಲೆ ಮೈದಾನ ದೇವತಾ ಸಮಿತಿ’ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ ನಿಧನ

‘ಕಿಲ್ಲೆ ಮೈದಾನ ದೇವತಾ ಸಮಿತಿ’ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ ನಿಧನ

ಪುತ್ತೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರವಲ್ಲದೇ ಹೊರ ಜಿಲ್ಲೆಗಳಲ್ಲೂ ಪ್ರಸಿದ್ಧಿಯನ್ನು ಪಡೆದಿರುವ ಇಲ್ಲಿನ ಕಿಲ್ಲೆ ಮೈದಾನದಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ ಶ್ರೀ ಗಣೇಶೋತ್ಸವ ಆಚರಣೆಯನ್ನು ಆಯೋಜಿಸುವ ‘ಕಿಲ್ಲೆ ಮೈದಾನ ದೇವತಾ ಸಮಿತಿ’ಯ ಅಧ್ಯಕ್ಷರಾದ ಉದ್ಯಮಿ, ಸಾಮಾಜಿಕ-ಧಾರ್ಮಿಕ ಮುಂದಾಳು ಮತ್ತು ದಾನಿ ನೆಲ್ಲಿಕಟ್ಟೆ ಸುಧಾಕರ ಶೆಟ್ಟಿ ಅವರು ಭಾನುವಾರ (ಸೆ.10) ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಈ ಬಾರಿಯ ಗಣೇಶೋತ್ಸವ ಆಚರಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವಂತೆ, ಅದರ ಪೂರ್ವ ಸಿದ್ಧತಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಸುಧಾಕರ ಶೆಟ್ಟಿ ಅವರ ಅನಿರೀಕ್ಷಿತ ಅಗಲಿಕೆ ಅವರ ಬಂಧುಗಳಿಗೆ, ಹಿತೈಷಿಗಳಿಗೆ ಮತ್ತು ಪುತ್ತೂರಿನ ಜನತೆಗೆ ಭಾರೀ ಆಘಾತ ನೀಡಿದೆ.

ನಾಳೆ (ಸೆ.11) ಅವರ ಮೃತದೇಹ ನೆಲ್ಲಿಕಟ್ಟೆಯಲ್ಲಿರುವ ಅವರ ಮನೆಗೆ ಬರಲಿದೆ ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.

ನೆಲ್ಲಿಕಟ್ಟೆ ಸುಧಾಕರ ಶೆಟ್ಟಿ ಅವರು ಕಳೆದ 42 ವರ್ಷಗಳಿಂದ ದೇವತಾ ಸಮಿತಿಯ ಅಧ್ಯಕ್ಷರಾಗಿ ಕಿಲ್ಲೆ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವ ಆಚರಣೆಯ ರೂವಾರಿಯಾಗಿದ್ದಾರೆ.

ಮಾತ್ರವಲ್ಲದೇ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ, ದೇವಸ್ಥಾನದ ಬ್ರಹ್ಮಕಲಶ ಸಮಿತಿಯ ಉಪಾಧ್ಯಕ್ಷರಾಗಿ, ಬ್ರಹ್ಮರಥ ಸಮರ್ಪಣಾ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವುದು ಮಾತ್ರವಲ್ಲದೇ, ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿಯ ಸಂಚಾಲಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಸ್ಥಳೀಯ ರಾಜಕಾರಣದಲ್ಲೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಸುಧಾಕರ ಶೆಟ್ಟಿ ಅವರು ಹತ್ತು ವರ್ಷಗಳ ಕಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಥಮ ವಿದ್ಯಾರ್ಥಿ ಸಂಘದ ಅಧ್ಯಕ್ಷರೂ ಆಗಿದ್ದರು.

1999 ಮತ್ತು 2004ರಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ರಾಜ್ಯ ರಾಜಕಾರಣದಲ್ಲೂ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದರು.

ಹೀಗೆ, ವಿದ್ಯಾರ್ಥಿ ದಿಸೆಯಿಂದಲೂ ಸಾಮಾಜಿಕ, ಧಾರ್ಮಿಕ ರಾಜಕೀಯ, ಕ್ರೀಡಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದು ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿ ಎಲ್ಲರ ಪ್ರೀತಿಪಾತ್ರರಾಗಿದ್ದ ‘ಸುಧಣ್ಣ’ ಅವರ ದಿಢೀರ್ ಅಗಲಿಕೆ ಪುತ್ತೂರಿನ ಜನತೆಗೆ ಆಘಾತ ತಂದಿದೆ.

Related Articles

Leave a Reply

Your email address will not be published. Required fields are marked *

error: Content is protected !!