ಹೊಸದಿಲ್ಲಿ : ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವ ಸಂಪತ್ತಿನ ಮರುಹಂಚಿಕೆ ಆಶ್ವಾಸನೆಯ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮುಗಿಬಿದ್ದಿರುವಂತೆ ಕಾಂಗ್ರೆಸ್ಸಿನ ಹಿರಿಯ ಕಾಂಗ್ರೆಸ್ ಮುಖಂಡ, ಪಕ್ಷದ ಥಿಂಕ್ ಟ್ಯಾಂಕ್ ಎಂದು ಗುರುತಿಸಿಕೊಂಡಿರುವ ಸ್ಯಾಮ್ ಪಿತ್ರೋಡ ಈ ಕುರಿತಾಗಿ ನೀಡಿದ ಹೇಳಿಕೆ ಬಿಜೆಪಿಯ ಟೀಕೆಗೆ ಇನ್ನೊಂದಿಷ್ಟು ಬಲ ತುಂಬಿದೆ.
ರಾಹುಲ್ ಗಾಂಧಿಯ ಅತ್ಯಾಪ್ತ ವಲಯದಲ್ಲಿರುವ ಪಿತ್ರೋಡ ಅಮೆರಿಕದಲ್ಲಿರುವಂತೆ ಭಾರತದಲ್ಲೂ ಪಿತ್ರಾರ್ಜಿತ ತೆರಿಗೆ ಪದ್ಧತಿ ಜಾರಿಗೆ ತಂದರೆ ಉತ್ತಮ ಎಂದು ಪ್ರತಿಪಾದಿಸಿದ್ದಾರೆ. ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪಿತ್ರೋಡ ಅಮೆರಿಕದ ಕೆಲವು ರಾಜ್ಯಗಳಲ್ಲಿ ಸಂಪತ್ತಿನ ಒಡೆಯ ಮೃತನಾದರೆ ಅವನ ಪೂರ್ತಿ ಸಂಪತ್ತು ಮಕ್ಕಳಿಗೆ ಸಿಗುವುದಿಲ್ಲ. ಕೇವಲ ಶೇ.45 ಪಾಲನ್ನು ಮಾತ್ರ ಮಕ್ಕಳಿಗೆ ನೀಡಲಾಗುತ್ತಿದೆ. ಉಳಿದ ಶೇ.55 ಸಂಪತ್ತು ಸರಕಾರಕ್ಕೆ ಹೋಗುತ್ತದೆ. ಸರಕಾರ ಇದನ್ನು ತನಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳಬಹುದು ಎಂದು ಉದಾಹರಣೆ ಸಹಿತ ವಿವರಿಸಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವ ಸಂಪತ್ತಿನ ಮರುಹಂಚಿಕೆ ಭರವಸೆ ಕುತೂಹಲಕರವಾಗಿದೆ. ಇದು ಅಮೆರಿಕದ ಕೆಲವು ರಾಜ್ಯಗಳಲ್ಲಿರುವ ಕಾನೂನನ್ನು ಹೋಲುತ್ತದೆ. ಭಾರತದಲ್ಲಿ ಪ್ರಸ್ತುತ ಯಾರಾದರೂ ಕೋಟ್ಯಧೀಶ ಸತ್ತರೆ ಅವನ ಪೂರ್ತಿ ಆಸ್ತಿ ಮಕ್ಕಳ ಪಾಲಾಗುತ್ತದೆ. ಆದರೆ ಕಾಂಗ್ರೆಸ್ ಈ ಕಾನೂನನ್ನು ಬದಲಾಯಿಸಲು ಬಯಸುತ್ತದೆ ಎಂದಿದ್ದಾರೆ.
ಮೊನ್ನೆಯಿಂದೀಚೆಗೆ ಕಾಂಗ್ರೆಸ್ಸಿನ ಸಂಪತ್ತಿನ ಮರುಹಂಚಿಕೆಯನ್ನು ಟೀಕಿಸುತ್ತಿರುವ ಬಿಜೆಪಿಗೆ ಇದೀಗ ಪಿತ್ರೋಡ ಹೇಳಿಕೆ ಮೂಲಕ ಹೊಸ ಅಸ್ತ್ರವೊಂದು ಸಿಕ್ಕಿದೆ. ಮೋದಿ ಹೇಳಿದ್ದನ್ನು ಪಿತ್ರೋಡ ಪರೋಕ್ಷವಾಗಿ ಸಮರ್ಥಿಸಿಕೊಂಡಂತಾಗಿದೆ. ಈ ಕಾರಣಕ್ಕೆ ಪಿತ್ರೋಡ ಹೇಳಿಕೆ ಕಾಂಗ್ರೆಸ್ಸನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಪಕ್ಷದ ಹಿರಿಯ ನಾಯಕ ಜೈರಾಮ್ ರಮೇಶ್ ಇದು ಪಕ್ಷದ ನಿಲುವಲ್ಲ, ಪಿತ್ರೋಡ ಅವರ ವೈಯಕ್ತಿಕ ಅಭಿಪ್ರಾಯ. ಭಾರತದಲ್ಲಿ ಎಲ್ಲರಿಗೂ ಅಭಿಪ್ರಾಯ ತಿಳಿಸುವ ಹಕ್ಕು ಇದೆ ಎಂದು ಹೇಳಿ ಡ್ಯಾಮೇಜ್ ಕಂಟ್ರೋಲ್ ಮಾಡಲು ಪ್ರಯತ್ನಿಸಿದ್ದಾರೆ.
ಪಿತ್ರೋಡ ಹೇಳಿಕೆಗೆ ತಕ್ಷಣ ಪ್ರತಿಕ್ರಿಯಿಸಿರುವ ಬಿಜೆಪಿ ನಿಮ್ಮ ಆಸ್ತಿ ಕಬಳಿಸಲು ಬರುತ್ತಿದ್ದಾರೆ ಹುಷಾರ್!, ಕಾಂಗ್ರೆಸ್ಸಿಗೆ ಮತ ಹಾಕುವುದು ನಿಮ್ಮ ಹಣವನ್ನು, ಆಸ್ತಿಯನ್ನು, ಸೊತ್ತುಗಳನ್ನು ಕಳೆದುಕೊಳ್ಳುವುದಕ್ಕೆ ಸಮ ಎಂದು ಮುಗಿಬಿದ್ದಿದೆ.
ಕಾಂಗ್ರೆಸ್ಸಿನ ಗಾಂಧಿಗಳು ಅವರ ಮಕ್ಕಳು, ಮೊಮ್ಮಕ್ಕಳಿಗೆ ಬೇಕಾಗುವಷ್ಟು ಸಂಪತ್ತು ಸಂಗ್ರಹಿಸಿ ಇಟ್ಟಿದ್ದಾರೆ. ಆದರೆ ಅವರು ನಿಮ್ಮ ಆಸ್ತಿಯನ್ನು ಹಂಚಲು ಉಯಸಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.