ಕೊಲಂಬೋ: ಲೋವೆಸ್ಟ್ ಸ್ಕೋರ್ ಮ್ಯಾಚೊಂದಕ್ಕೆ ಸಾಕ್ಷಿಯಾದ ಏಷ್ಯಾಕಪ್ ಫೈನಲ್ ನಲ್ಲಿ ಸೀಮರ್ ಸಿರಾಜ್ ದಾಳಿಗೆ ತಿಪ್ಪರಲಾಗ ಹಾಕಿದ ಲಂಕಾ ಪಡೆ ಕೇವಲ 15.2 ಓವರ್ ಗಳಲ್ಲಿ 50 ರನ್ನುಗಳಿಗೆ ಆಲೌಟ್ ಆಗುವ ಸಂಕಟಕ್ಕೆ ಸಿಲುಕಿ 10 ವಿಕೆಟ್ ಗಳ ಘನಘೋರ ಸೋಲನ್ನು ಕಂಡಿದೆ.
ಈ ಮೂಲಕ ಟೀಂ ಇಂಡಿಯಾ 8ನೇ ಬಾರಿ ಏಷ್ಯಾ ಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
ಸೀಮರ್ ಮಹಮ್ಮದ್ ಸಿರಾಜ್ ಅವರ ನಿಖರ ದಾಳಿಗೆ (7-1-21-6) ಲಂಕಾ ದಾಂಡಿಗರ ಬಳಿ ಉತ್ತರವೇ ಇರಲಿಲ್ಲ. ಕೇವಲ 12 ರನ್ ಗಳಾಗುವಷ್ಟರಲ್ಲಿ ಶ್ರೀಲಂಕಾ ತಂಡ 6 ವಿಕೆಟ್ ಗಳನ್ನು ಕಳೆದುಕೊಂಡು ಏದುಸಿರು ಬಿಡುವಂತಾಗಿತ್ತು.
ಕಳೆದ ಪಾಕ್ ವಿರುದ್ಧದ ಪಂದ್ಯದ ಹೀರೋ ವಿಕೆಟ್ ಕೀಪರ್ ಕುಸಲ್ ಮೆಂಡಿಸ್ (17) ಅವರದ್ದೇ ಲಂಕಾ ಪಾಳಯದಲ್ಲಿ ಟಾಪ್ ಗಳಿಕೆ ಇವರನ್ನು ಹೊರತುಪಡಿಸಿದರೆ ಟೈಲ್ ಎಂಡ್ ನಲ್ಲಿ ದುಶನ್ ಹೇಮಂತ್ (13) ಅವರೇ ಸೆಕೆಂಡ್ ಟಾಪರ್. ಉಳಿದವರದ್ದೆಲ್ಲ ‘ಸಿಂಗಲ್ ನಂಬರ್’ ಗಳಿಕೆ!
ಟೀಂ ಇಂಡಿಯಾ ಬೌಲರ್ ಗಳು ಇಂದು ಪ್ರೇಮದಾಸ ಕ್ರೀಡಾಂಗಣದಲ್ಲಿ ಭರ್ಜರಿಯಾಗಿ ಮೆರೆದಾಡಿದರು. ಮಹಮ್ಮದ್ ಸಿರಾಜ್ 6 ವಿಕೆಟ್ ಪಡೆದು ಮಿಂಚಿದರೆ, ಹಾರ್ದಿಕ್ ಪಾಂಡ್ಯ 3 ವಿಕೆಟ್ ಪಡೆದರು, ಇನ್ನೊಂದು ವಿಕೆಟ್ ಬುಮ್ರಾ ಪಾಲಾಯ್ತು.
50 ರನ್ ಚೇಸಿಂಗ್ ಗೆ ಇಳಿದ ಟೀಂ ಇಂಡಿಯಾ ಕೇವಲ 6.1 ಓವರ್ ಗಳಲ್ಲಿ ಗೆಲುವಿನ ಗುರಿ ತಲುಪಿ ‘ಏಷ್ಯಾ ಖಂಡದ ಕ್ರಿಕೆಟ್’ ಲೋಕಕ್ಕೆ ಅಧಿಪತಿಯಾಯ್ತು.
ಓಪನರ್ ಗಳಾದ ಇಶಾನ್ ಕಿಶನ್ 23 ಮತ್ತು ಶುಭ್ಮನ್ ಗಿಲ್ 27 ರನ್ ಬಾರಿಸಿದರು.