Site icon newsroomkannada.com

ಯುವತಿ ಸ್ನಾನ ಮಾಡ್ತಿದ್ದಾಗ ರೆಕಾರ್ಡ್ ಮಾಡಿದ – ಓಡಿ ಹೋಗಿ ಪೊಲೀಸ್ರಿಗೆ ತಗ್ಲಾಕ್ಕೊಂಡ!

(Representative Image Used)

ಬಂಟ್ವಾಳ: ಯುವತಿಯೊಬ್ಬಳು ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಈ ದೃಶ್ಯವನ್ನು ಅಪರಿಚಿತ ವ್ಯಕ್ತಿಯೊಬ್ಬ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿ ಬಳಿಕ ಅಲ್ಲಿಂದ ಎಸ್ಕೇಪ್ ಆಗಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಜಕ್ರಿಬೆಟ್ಟು ಎಂಬಲ್ಲಿನ‌ ಹಂಚಿನ ಮನೆಯೊಳಗೆ ಬಚ್ಚಲು ಕೋಣೆಯಲ್ಲಿ ರಾತ್ರಿ ವೇಳೆ ಯುವತಿಯೋರ್ವಳು ಸ್ನಾನ ಮಾಡುತ್ತಿರುವ ವೇಳೆ ಅಪರಿಚಿತ ವ್ಯಕ್ತಿಯೋರ್ವ ಗೋಡೆಯ ಕಿಂಡಿ ನಡುವಿನಿಂದ ಮೊಬೈಲ್ ಮೂಲಕ ಸ್ನಾನದ ದೃಶ್ಯಗಳನ್ನು ರೆಕಾರ್ಡ್ ಮಾಡುತ್ತಿದ್ದ.

ಇದನ್ನು ಗಮನಿಸಿದ ಯುವತಿ ಜೋರಾಗಿ ಬೊಬ್ಬೆ ಹಾಕಿದ್ದು, ತಕ್ಷಣವೇ ಅಪರಿಚಿತ ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಯುವತಿಯ ಬೊಬ್ಬೆ ಕೇಳಿ ಇವಳ ತಾಯಿ ಹಾಗೂ ನೆರೆಮನೆಯವರು ಓಡಿ ಬಂದು ವಿಷಯ ಕೇಳಿ, ಓಡಿಹೋದ ವ್ಯಕ್ತಿಯ ಹುಡುಕಾಟ ನಡೆಸಿದ್ದಾರೆ ಆದರೆ, ಅಂದು ಆತನ ಪತ್ತೆಯಾಗಿರಲಿಲ್ಲ.

ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 ಆರೋಪಿ ವಶಕ್ಕೆ

ಬಚ್ಚಲು ಕೋಣೆಯಲ್ಲಿ ಸ್ನಾನ ಮಾಡುತ್ತಿದ್ದ ಯುವತಿಯ ವಿಡಿಯೋ ಚಿತ್ರೀಕರಣ ಮಾಡಿದ ಆರೋಪಿ ಜಗದೀಪ್ ಆಚಾರ್ಯ ಎಂಬಾತನನ್ನು ಬಂಟ್ವಾಳ ನಗರ ಪೋಲೀಸ್ ಠಾಣೆಯ ಎಸ್.ಐ. ರಾಮಕೃಷ್ಣ ನೇತೃತ್ವದ ತಂಡ ವಶಕ್ಕೆ ಪಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಗ್ರಾರ್ ನಿವಾಸಿಯಾಗಿರುವ ಆರೋಪಿಯನ್ನುಇದೀಗ  ಪೋಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಘಟನೆ ಕುರಿತು ಪ್ರಕರಣ ದಾಖಲಾದ ಬೆನ್ನಲ್ಲೆ ಪೋಲೀಸರು ಆರೋಪಿಯ ಪತ್ತೆಗೆ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಬಳಿಕ,  ಸಂಶಯದ ಮೇಲೆ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಈತ ಸತ್ಯ ಬಾಯಿಬಿಟ್ಟಿದ್ದಾನೆ ಎಂಬುದು ತಿಳಿದು ಬಂದಿದೆ.

Exit mobile version