ಉಳ್ಳಾಲ: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ನಿವಾಸಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯನ್ನು ಬಂಧಿಸಲಾಗಿದೆ. ಮೂಡಿಗೆರೆ ತಾಲೂಕಿನ ಅಣಜೂರಿನ ಗ್ರಾಮದ ಅಪ್ರಾಪ್ತ ಯುವತಿಯನ್ನು ಮಂಗಳೂರಿನ ಪಂಪ್ ವೆಲ್ ಗೆ ಬಸ್ಸಿನಲ್ಲಿ ಬರಮಾಡಿಸಿಕೊಂಡು ಬಳಿಕ ರಿಕ್ಷಾದಲ್ಲಿ, ಕುಂಪಲದ ಬಾಡಿಗೆ ಮನೆಗೆ ಕರೆದುಕೊಂಡು ಹೋಗಿ ನಿನ್ನನ್ನು ಮದುವೆಯಾಗುತ್ತೇನೆಂದು ಭರವಸೆ ನೀಡಿ ಬಾಲಕಿಗೆ 4 ತಿಂಗಳಿನಿಂದ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿ ಮೊಹಮ್ಮದ್ ರಝೀನ್ ಎಂಬಾತನನ್ನು ಡಿ.31ರಂದು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈ ಪತ್ತೆ ಕಾರ್ಯವು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ನಿರ್ದೇಶನದಂತೆ ಮಂಗಳೂರು ನಗರದ ಉಪ-ಪೊಲೀಸ್ ಆಯುಕ್ತ ಸಿದ್ಧಾರ್ಥ ಗೋಯಲ್ ಮಾರ್ಗದರ್ಶನದಲಿ, ಮಂಗಳೂರು ದಕ್ಷಿಣ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಧನ್ಯ.ಎನ್.ನಾಯಕ ನೇತೃತ್ವದಲ್ಲಿ ನಡೆದಿದೆ. ಉಳ್ಳಾಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಬಾಲಕೃಷ್ಣ, ಹೆಚ್.ಕೆ. ಪೊಲೀಸ್ ಉಪ-ನಿರೀಕ್ಷಕರಾದ ಶೀತಲ್ ಅಲಗೂರ, ಸಂತೋಷ ಕುಮಾರ್.ಡಿ, ಹೆಡ್‌ಕಾನ್‌ಸ್ಟೇಬಲ್‌ಗಳಾದ ನಂದೀಶ್ ಕುಮಾರ್, ರಂಜಿತ್‌ಕುಮಾರ್, ಉದಯಕುಮಾರ್, ಮಂಜುನಾಥ, ಮಹಿಳಾ ಹೆಡ್‌ಕಾನ್‌ಸ್ಟೇಬಲ್ ಶ್ರೀಲತ, ಪೊಲೀಸ್ ಕಾನ್‌ಸ್ಟೇಬಲ್‌ಗಳಾದ ಮಂಜುನಾಥ, ಆಕ್ಟರ್, ನವೀನ್, ಮನೋಜ್ ಮೊದಲಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.