ಬೆಳ್ತಂಗಡಿ : ಮೂಡುಬಿದಿರೆಯ ಮಂಗಳೂರು ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಜಿನಿಯರಿಂಗ್ ಕಾಲೇಜಿನ(ಮೈಟ್) ವಿದ್ಯಾರ್ಥಿನಿ ಶ್ರೀಪ್ರಿಯಾ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಈ ಬಾರಿ ವಿಶ್ವವಿದ್ಯಾಲಯಕ್ಕೆ 7 ನೇ ರ‍್ಯಾಂಕ್ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉಪಸ್ಥಿತಿಯಲ್ಲಿ ಆ.2ರಂದು ನಡೆದ 23ನೇ ವಾರ್ಷಿಕ ಘಟಿಕೋತ್ಸವದಲ್ಲಿ ಶ್ರೀಪ್ರಿಯಾ ಅವರು ಗಣ್ಯರಿಂದ ಪುರಸ್ಕಾರ ಪಡೆದರು. ಅವರು ಕ್ಯಾಂಪಸ್ ಆಯ್ಕೆ ಮೂಲಕ ಈಗಾಗಲೇ ಪೂನಾದಲ್ಲಿ ಎಚ್‌ಎಸ್‌ಬಿಸಿ ಬ್ಯಾಂಕ್ ನಲ್ಲಿ ಉದ್ಯೋಗ ಪಡೆದಿದ್ದಾರೆ.
ಸಾಧನೆಯ ಹಾದಿ: ತಮ್ಮ ಸಾಧನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀಪ್ರಿಯ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪ್ರತಿವರ್ಷ ನಡೆಸುವ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಅತ್ಯಂತ ಹೆಚ್ಚು ಪುನರಾವರ್ತನೆ ಆಗುತ್ತಿದ್ದ ಪ್ರಶ್ನೆಗಳ ಬಗ್ಗೆ ಹೆಚ್ಚಿನ ಪ್ರಮಾಣದಲ್ಲಿ ಗಮನಹರಿಸುತ್ತಿದ್ದೆ. ಮಹತ್ವದ ವಿಷಯಗಳ ಬಗ್ಗೆ ಪ್ರಾಧ್ಯಾಪಕರ ಬಳಿ ಚರ್ಚಿಸಿ ಬಗೆಹರಿಸಿಕೊಳ್ಳುತ್ತಿದ್ದೆ. ಬರೆದು ಕಲಿಯುವ ಅಭ್ಯಾಸ ರೂಢಿಸಿಕೊಂಡಿದ್ದರಿಂದ ಅದು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತಿತ್ತು. ಅಳದಂಗಡಿಂದ ಮೂಡುಬಿದಿರೆ ಕಾಲೇಜಿಗೆ ಬೆಳಗ್ಗೆ ಬೇಗ ತೆರಳಬೇಕಾದ್ದರಿಂದ ಆ ಸಮಯದಲ್ಲಿ ಓದಲು ಸಮಯ ಸಿಗುತ್ತಿರಲಿಲ್ಲ. ಕಾಲೇಜಿನಿಂದ ವಾಪಾಸ್ ಬಂದ ನಂತರ ಪ್ರತಿದಿನ ರಾತ್ರಿ 9 ರಿಂದ 11 ಗಂಟೆವರೆಗೆ ಹಾಗೂ ಪರೀಕ್ಷೆ ಸಂದರ್ಭದಲ್ಲಿ ಅಧಿಕ ಸಮಯ ಓದುತ್ತಿದ್ದೆ. ನನ್ನ ಸಾಧನೆಗೆ ಪೋಷಕರು ಮತ್ತು ಕಾಲೇಜಿನ ಬೋಧಕ ವರ್ಗ ಕಾರಣ ಎಂದು ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಈಕೆ ಬೆಳ್ತಂಗಡಿ ತಾಲೂಕು ಸುಲ್ಕೇರಿಮೊಗ್ರು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ವಿ. ಸುಬ್ರಹ್ಮಣ್ಯ ಭಟ್ ಅವರ ಪುತ್ರಿ, ಅಳದಂಗಡಿ ಎಂಬ ಗ್ರಾಮಾಂತರ ಪ್ರದೇಶದಿಂದ ನಿತ್ಯ ಕಾಲೇಜಿಗೆ ಓಡಾಟ ಮಾಡಿ ಈ ಸಾಧನೆ ಮಾಡಿರುವುದು ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ.