ಪುರೋಹಿತರ ಕುಟುಂಬದಲ್ಲಿ ಬೆಳೆದು ಬಂದ ಮಿಡ್ಲ್ ಕಾಸ್ ಹುಡುಗಿ ದಿವ್ಯಾರಾವ್ ಬೃಹತ್ ಹೋಟೆಲ್ ಸಾಮ್ರಾಜ್ಯ ಕಟ್ಟಿದ್ದು ಹೇಗೆ?
ಡಾ. ಎಪಿಜೆ ಅಬ್ದುಲ್ ಕಲಾಂ ಅವರನ್ನು ದಿವ್ಯಾ ನೆನೆಯುವುದು ಯಾಕೆ?
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ನಡೆದ ಬಳಿಕ ಆ ಕೆಫೆಯ ಮಾಲೀಕರು ಯಾರು ಎಂಬ ಹುಡುಕಾಟ ಇಂಟರ್ ನೆಟ್ ನಲ್ಲಿ ಜೋರಾಗಿದೆ. ಈ ನಿಟ್ಟಿನಲ್ಲಿ ಅಸಲಿಗೆ, ಈ ರಾಮೇಶ್ವರಂ ಕೆಫೆ ಶುರುವಾಗಿದ್ದು ಹೇಗೆ? ರಾಮೇಶ್ವರಂ ಕೆಫೆಯ ಓನರ್ ದಿವ್ಯಾ ಹಾಗೂ ರಾಘವೇಂದ್ರ ರಾವ್ ಯಾರು? ಎಲ್ಲಿಯವರು? ರೆಸ್ಟೋರೆಂಟ್‌ಗೆ ರಾಮೇಶ್ವರಂ ಅಂತ ಹೆಸರಿಟ್ಟಿದ್ದು ಯಾಕೆ ಎಂಬ ಮಾಹಿತಿ ಇಲ್ಲಿದೆ.
ರಾಮೇಶ್ವರಂ ಕೆಫೆಯನ್ನು ಆರಂಭಿಸಿದವರು ದಿವ್ಯಾ ಹಾಗೂ ರಾಘವೇಂದ್ರ ರಾವ್. ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದ ರಾಘವೇಂದ್ರ ರಾವ್ ಅವರಿಗೆ ಫುಡ್ ಇಂಡಸ್ಟ್ರಿಯಲ್ಲಿ 20+ ವರ್ಷಗಳ ಅನುಭವ ಇದೆ. ಇತ್ತ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಆಗಿದ್ದವರು ದಿವ್ಯಾ. ರಾಘವೇಂದ್ರ ರಾವ್ ಹಾಗೂ ದಿವ್ಯಾ ಕೈಜೋಡಿಸಿ 2021ರಲ್ಲಿ ‘ದಿ ರಾಮೇಶ್ವರಂ ಕೆಫೆ’ ಆರಂಭಿಸಿದರು.
ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಮೇಲೆ ದಿವ್ಯಾ ಹಾಗೂ ರಾಘವೇಂದ್ರ ರಾವ್ ವಿಶೇಷ ಅಭಿಮಾನ ಹೊಂದಿದ್ದಾರೆ. ಎಪಿಜೆ ಅಬ್ದುಲ್ ಕಲಾಂ ಅವರ ಹುಟ್ಟೂರು ರಾಮೇಶ್ವರಂ. ಹೀಗಾಗಿ, ತಮ್ಮ ಕೆಫೆಗೆ ‘ದಿ ರಾಮೇಶ್ವರಂ ಕೆಫೆ’ ಅಂತ ಹೆಸರಿಟ್ಟಿದ್ದಾರೆ. ದಿವ್ಯಾ ಬೆಂಗಳೂರಿನವರೇ. ಪುರೋಹಿತರ ಕುಟುಂಬದಲ್ಲಿ ಬೆಳೆದು ಬಂದವರು ದಿವ್ಯಾ. ಮಿಡಲ್ ಕ್ಲಾಸ್ ಫ್ಯಾಮಿಲಿಯ ಹುಡುಗಿ ದಿವ್ಯಾ. ತಾವು 3ನೇ ಕ್ಲಾಸ್‌ನಲ್ಲಿ ಓದುವಾಗಲೇ ಫ್ಯಾಮಿಲಿಯಲ್ಲಿನ ಆರ್ಥಿಕ ಬಿಕ್ಕಟ್ಟಿಗೆ ದಿವ್ಯಾ ಸಾಕ್ಷಿಯಾಗಿದ್ದರು. ಚೆನ್ನಾಗಿ ಓದಿ, ಕುಟುಂಬವನ್ನ ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಉದ್ದೇಶದಿಂದ ಸಿಎ ಆಗಬೇಕು ಎಂಬ ಆಸೆ ಅವರಲ್ಲಿ ಹುಟ್ಟಿತು. ಪಿಯುಸಿ ಬಳಿಕ ದಿವ್ಯಾ ಸಿಎ ಆದರು. ಆನಂತರ ಐಐಎಂ ಅಹಮದಾಬಾದ್‌ನಲ್ಲಿ ‘ಮ್ಯಾನೇಜ್‌ಮೆಂಟ್ & ಫೈನಾನ್ಸ್’ ಶಿಕ್ಷಣ ಪಡೆದರು. ಅಲ್ಲಿ ಫುಡ್ ಬಿಸಿನೆಸ್ ಬಗ್ಗೆ ಕೇಸ್ ಸ್ಟಡೀಸ್ ಮಾಡಿದ್ಮೇಲೆ ರೆಸ್ಟೋರೆಂಟ್ ತೆರೆಯುವ ಮನಸ್ಸು ಮಾಡಿದರು ದಿವ್ಯಾ. ಇವರಿಗೆ ಕೈಜೋಡಿಸಿದವರು ರಾಘವೇಂದ್ರ ರಾವ್. ಕೋವಿಡ್ ಸಮಯದಲ್ಲಿ ಪ್ಲಾನ್ ಮಾಡಿ 2021ರಲ್ಲಿ ‘ರಾಮೇಶ್ವರಂ ಕೆಫೆ’ ತೆರೆದರು ದಿವ್ಯಾ ಮತ್ತು ರಾಘವೇಂದ್ರ ರಾವ್.
2021ರಲ್ಲಿ ಇಂದಿರಾನಗರದ ಪುಟ್ಟ ಸ್ಥಳದಲ್ಲಿ ‘ದಿ ರಾಮೇಶ್ವರಂ ಕೆಫೆ’ಯನ್ನ ದಿವ್ಯಾ ಮತ್ತು ರಾಘವೇಂದ್ರ ರಾವ್ ಆರಂಭಿಸಿದರು. ಸದ್ಯ ಬೆಂಗಳೂರಿನಲ್ಲಿ ಇದರ 4+ ಔಟ್‌ಲೆಟ್‌ಗಳಿವೆ. 700ಕ್ಕೂ ಅಧಿಕ ಸಿಬ್ಬಂದಿ ‘ದಿ ರಾಮೇಶ್ವರಂ ಕೆಫೆ’ಗಾಗಿ ಕೆಲಸ ಮಾಡ್ತಿದ್ದಾರೆ.