ಹೈದರಾಬಾದ್: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣ ದೇಶದ ಜನರಲ್ಲಿ ಆತಂಕ ಹೆಚ್ಚಿಸಿದೆ. ಐಇಡಿ ಸ್ಫೋಟಕದ ಕುರಿತು ತನಿಖೆ ನಡೆಯುತ್ತಿದೆ. ಇದರ ನಡುವೆ ಜನರಿಂದ ಆತಂಕ ದೂರಗೊಳಿಸಲು ಹಾಗೂ ಒಗ್ಗಟ್ಟೂ ಮೂಡಿಸಲು ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೈದರಾಬಾದ್‌ನಲ್ಲಿ ರಾಮೇಶ್ವರಂ ಕೆಫೆಗೆ ಭೇಟಿ ನೀಡಿ ತಿಂಡಿ ಸವಿದಿದ್ದಾರೆ. ಇದೇ ವೇಳೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟವನ್ನು ಖಂಡಿಸಿದ್ದಾರೆ.
ಹೈದರಾಬಾದ್‌ನ ರಾಮೇಶ್ವರಂ ಕೆಫೆಗೆ ಭೇಟಿ ನೀಡಿ ಆಹಾರ ಸವಿದಿದ್ದೇನೆ. ಆಹಾರ ರುಚಿ ಉತ್ತಮವಾಗಿದೆ. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮಸ್ಥಳದ ಹೆಸರನ್ನು ಈ ಹೊಟೆಲ್‌ಗೆ ಇಡಲಾಗಿದೆ ಅನ್ನೋದು ನೆನನಪಿನಲ್ಲಿಟ್ಟುಕೊಳ್ಳಬೇಕಾದ ವಿಚಾರ. ಬೆಂಗಳೂರು ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟ ಹೇಡಿತನದ ಕೃತ್ಯ. ಇದು ಭಾರತೀಯ ಮೌಲ್ಯಗಳ ಮೇಲಿನ ದಾಳಿಯಾಗಿದೆ ಎಂದು ಅಸಾದುದ್ದೀನ್ ಒವೈಸ್ ಹೇಳಿದ್ದಾರೆ.
ಒವೈಸಿ ಹೈದರಾಬಾದ್ ರಾಮೇಶ್ವರಂ ಕೆಫಗೆ ಭೇಟಿ ನೀಡುತ್ತಿದ್ದಂತೆ ಹಲವು ಬೆಂಬಲಿಗರು, ಅಭಿಮಾನಿಗಳು ಒವೈಸಿ ಜೊತೆ ಫೋಟೋ ಕ್ಲಿಕಿಸಿಕೊಂಡಿದ್ದಾರೆ. ಒವೈಸಿ ಜೊತೆ ಮಾತುಕತೆ ನಡೆಸಿದ್ದಾರೆ. ಆಹಾರ ಸವಿಯುತ್ತಾ, ಹೊಟೆಲ್‌ಗೆ ಆಗಮಿಸಿದ ಗ್ರಾಹಕರ ಜೊತೆ ಒವೈಸಿ ಮಾತನಾಡಿದ್ದಾರೆ.
ಎಪಿಜಿ ಅಬ್ದುಲ್ ಕಲಾಂ ಅವರನ್ನು ಮಾದರಿಯಾಗಿ ತೆಗೆದುಕೊಂಡು ರಾಮೇಶ್ವರಂ ಕೆಫೆ ಹೋಟೆಲ್ ಆರಂಭಿಸಲಾಗಿದೆ. ಕೆಫೆಯ ಮಾಲೀಕ ರಾಘವೇಂದ್ರ ರಾವ್ ಕೋಲಾರ ಮೂಲದವರು. 2012ರಲ್ಲಿ ಸಣ್ಣ ಮಟ್ಟದಲ್ಲಿ ಆರಂಭಿಸಿದ ಕೆಫೆ ಇದೀಗ ಬೆಂಗಳೂರು, ಹೈದರಾಬಾದ್ ಸೇರಿದಂತೆ ಪ್ರಮುಖ ಭಾಗಗಳಲ್ಲಿ ಶಾಖೆಗಳನ್ನು ಹೊಂದಿದೆ.