ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರದ ಲೋಕಾರ್ಪಣೆಗೆ ಮೂರೇ ದಿನಗಳು ಬಾಕಿ ಉಳಿದಿವೆ. ರಾಮನಗರಿ ಅಯೋಧ್ಯೆಯಲ್ಲಿ ಹಬ್ಬ, ಜಾತ್ರೆಯ ಸಂಭ್ರಮ ಮನೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 22ರಂದು ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಗೆ ಪ್ರಾಣಪ್ರತಿಷ್ಠಾಪನೆ ನೆರವೇರಿಸಲಿದ್ದಾರೆ. ಇನ್ನು ರಾಮಮಂದಿರವನ್ನು ವೈಜ್ಞಾನಿಕವಾಗಿ, ಸದೃಢವಾಗಿ ನಿರ್ಮಿಸಲಾಗಿದ್ದು, ಒಂದು ಸಾವಿರ ವರ್ಷ ಕಳೆದರೂ ಮಂದಿರಕ್ಕೆ ಹಾನಿಯಾಗದಿರುವ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ.
ಸಾವಿರ ವರ್ಷದವರೆಗೆ ರಿಪೇರಿಯೇ ಬೇಡ: ರಾಮಮಂದಿರವನ್ನು ಕಬ್ಬಿಣ, ಉಕ್ಕು ಸೇರಿ ಯಾವುದೇ ವಸ್ತುಗಳನ್ನು ಬಳಸದೆ, ವಿಶೇಷ ಕಲ್ಲುಗಳಿಂದ ನಿರ್ಮಿಸಲಾಗಿದೆ. ಸುಮಾರು 15 ಅಡಿ ಅಗೆದು, ಮಣ್ಣು ತೆಗೆದು, ಆ ಮಣ್ಣನ್ನು ರಿ-ಎಂಜಿನಿಯರಿಂಗ್ ಮಾಡಿ ಮತ್ತೆ ತುಂಬಲಾಗಿದೆ. ದೇಶದ ತಜ್ಞ ಎಂಜಿನಿಯರ್‌ಗಳು, ತಜ್ಞರು ರಾಮಮಂದಿರಕ್ಕಾಗಿ ಶ್ರಮಿಸಿದ್ದಾರೆ. ಹಾಗಾಗಿ, ಒಂದು ಸಾವಿರ ವರ್ಷವಾದರೂ ರಾಮಮಂದಿರವನ್ನು ಕನಿಷ್ಠ ರಿಪೇರಿ ಮಾಡಬೇಕಾಗಿಲ್ಲ ಎಂದು ಹೇಳಲಾಗುತ್ತಿದೆ. 6.5 ತೀವ್ರತೆಯ ಭೂಕಂಪ ಸಂಭವಿಸಿದರೂ ಏನೂ ಆಗಲ್ಲ
ನೇಪಾಳವು ನಮ್ಮ ಗಡಿ ರಾಷ್ಟ್ರವಾದ ಕಾರಣ, ಅಲ್ಲಿ ಭೂಕಂಪ ಸಂಭವಿಸಿದರೆ ಹೆಚ್ಚು ಪರಿಣಾಮ ಬೀರುತ್ತದೆ. ಇದನ್ನು ಮನಗಂಡೇ ರಾಮಮಂದಿರಕ್ಕೆ ವಿಶೇಷ ಬುನಾದಿ ಹಾಕಲಾಗಿದೆ. ಐಐಟಿ ಎಂಜಿನಿಯರ್‌ಗಳು, ತಜ್ಞರು ರಾಮಮಂದಿರ ಬುನಾದಿಗೆ ಶ್ರಮಿಸಿದ್ದಾರೆ. ಹಾಗಾಗಿ, ರಿಕ್ಟರ್ ಮಾಪನದಲ್ಲಿ 6.5 ತೀವ್ರತೆಯ ಭೂಕಂಪ ಸಂಭವಿಸಿದರೂ ರಾಮಮಂದಿರಕ್ಕೆ ಏನೂ ಆಗುವುದಿಲ್ಲ.
ರಾಮಮಂದಿರ ನಿರ್ಮಾಣದ ವೈಶಿಷ್ಟ್ಯಗಳು: ರಾಮಮಂದಿರದ ಬುನಾದಿಯನ್ನು ರಾತ್ರಿ ವೇಳೆ ಮಾತ್ರ ನಿರ್ಮಿಸಲಾಗಿದೆ. ತಾಪಮಾನದ ಕಾರಣದಿಂದಾಗಿ ರಾತ್ರಿ ಮಾತ್ರ ಬುನಾದಿ ಹಾಕಲಾಗಿದೆ. ಬುನಾದಿಗೆ 21 ಅಡಿ ದಪ್ಪದ ಗ್ರಾನೈಟ್ ಬಳಸಲಾಗಿದೆ. ಸೇತುವೆ ನಿರ್ಮಾಣಕ್ಕೆ ಬಳಸುವ ಪಿಲ್ಲರ್‌ಗಳನ್ನು ಬುನಾದಿಗೆ ಹಾಕಲಾಗಿದೆ. ಧೂಳು, ಕೆಮಿಕಲ್ ಮಿಶ್ರಣ ಮಾಡಿ, 56 ಲೇಯರ್‌ಗಳ ಮೂಲಕ ರಾಮಮಂದಿರ ನಿರ್ಮಿಲಾಗಿದೆ. ಇದಕ್ಕಾಗಿ ವಿಶೇಷ ಕಾಂಕ್ರೀಟ್ ಹಾಕಲಾಗಿದೆ.
ಕನ್‌ಸ್ಟ್ರಕ್ಷನ್ ದೈತ್ಯ ಲಾರ್ಸೆನ್ ಆಯಂಡ್ ಟರ್ಬೊ, ಟಾಟಾ ಕನ್ಸಲ್ಟಿಂಗ್ ಎಂಜಿನಿಯರ್ಸ್ ಲಿಮಿಟೆಂಡ್ ಕಂಪನಿಗಳು ನಿರ್ಮಾಣದ ಹೊಣೆ ಹೊತ್ತುಕೊಂಡಿವೆ. ನಾಗರ ಶೈಲಿಯಿಂದ ಸ್ಫೂರ್ತಿ ಪಡೆದು, 360 ಪಿಲ್ಲರ್‌ಗಳನ್ನು ಬಳಸಿ ರಾಮಮಂದಿರ ನಿರ್ಮಿಸಲಾಗಿದೆ. ಇಡೀ ಮಂದಿರವನ್ನು ಕಲ್ಲಿನಿಂದಲೇ ನಿರ್ಮಿಸಲಾಗಿದೆ. ಸಿಮೆಂಟ್, ಕಬ್ಬಿಣ, ಸ್ಟೀಲ್ ಬಳಸಿಲ್ಲ. ಭೂಕಂಪ, ಪ್ರವಾಹ, ಚಂಡಮಾರುತ ಅಪ್ಪಳಿಸಿದರೂ ರಾಮಮಂದಿರಕ್ಕೆ ಏನೂ ಆಗುವುದಿಲ್ಲ ಎಂದು ತಜ್ಞರು ಭರವಸೆ ನೀಡಿದ್ದಾರೆ.