Site icon newsroomkannada.com

ಅಂತಪುರದಿಂದ ರಾಜಕಾರಣದವರೆಗೆ: ರಾಜಸ್ಥಾನದ ಡಿಸಿಎಂ ದಿಯಾ ಕುಮಾರಿ ಅಚ್ಚರಿ ಪಯಣ

ಜೈಪುರ: ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಭಜನ್‌ಲಾಲ್‌ ಶರ್ಮಾ ಅವರನ್ನು ರಾಸ್ಥಾನದ ನೂತನ ಸಿಎಂ ಆಯ್ಕೆ ಮಾಡುವ ಮೂಲಕ ಬಿಜೆಪಿ ಅಚ್ಚರಿ ಮೂಡಿಸಿದೆ. ಈ ಬೆನ್ನಲ್ಲೇ ರಾಜವಂಶಸ್ಥೆ ದಿಯಾ ಕುಮಾರಿ ಹಾಗೂ ಹಿರಿಯ ನಾಯಕ ಪ್ರೇಮ್‌ಚಂದ್‌ ಬೈರ್ವಾ ಅವರನ್ನ ಉಪಮುಖ್ಯಮಂತ್ರಿಗಳಾಗಿ ನೇಮಕ ಮಾಡಿದೆ.

ರಾಜ್ಯಸ್ಥಾನದ ನೂತನ ಉಪಮುಖ್ಯಮಂತ್ರಿಗಳಲ್ಲಿ ಒಬ್ಬರಾದ ದಿಯಾ ಕುಮಾರಿ ಅವರು 1970ರ ಜನವರಿ 30 ರಂದು ರಾಜಮನೆತನದಲ್ಲಿ ಜನಿಸಿದರು. ಅವರ ಅಜ್ಜ ಮಾನ್‌ ಸಿಂಗ್‌ II (2ನೇ ಮಾನ್‌ಸಿಂಗ್‌) ಜೈಪುರದ ಕೊನೆಯ ಆಡಳಿತ ಮಹರಾಜರಾಗಿದ್ದರು. ಇನ್ನೂ ದಿಯಾ ಕುಮಾರಿ ಅವರ ತಂದೆ ಬ್ರಿಗೇಡಿಯರ್ ಸವಾಯಿ ಭವಾನಿ ಸಿಂಗ್ ಅವರಿಗೆ 1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಹೋರಾಡಿದ ಶೌರ್ಯಕ್ಕಾಗಿ ಮಹಾವೀರ ಚಕ್ರ ನೀಡಿ ಗೌರವಿಸಲಾಗಿತ್ತು.
ದಿಯಾ ಕುಮಾರಿ ಅವರು ಮಹಾರಾಣಿ ಗಾಯತ್ರಿ ದೇವಿ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣ ಪೂರ್ಣಗೊಳಿಸಿದರು. ಜೈಪುರದ ಮಹಾರಾಣಿ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಮುಗಿಸಿದರು. ಬಳಿಕ ನರೇಂದ್ರ ಸಿಂಗ್ ಎಂಬವರನ್ನ ವಿವಾಹವಾದರು. ದಂಪತಿಗೆ ಜೈಪುರದ ರಾಜವಂಶಸ್ಥ ಪದ್ಮನಾಭ್ ಸಿಂಗ್ ಸೇರಿದಂತೆ ಅವರಿಗೆ ಮೂವರು ಮಕ್ಕಳಿದ್ದಾರೆ. ಆದ್ರೆ 2018ರಲ್ಲಿ ದಿಯಾ ಕುಮಾರಿ ಪತಿಗೆ ವಿಚ್ಛೇದನ ನೀಡಿದ್ದರು

ಕಾಲೇಜು ಶಿಕ್ಷಣದ ಬಳಿಕ ರಾಜಕೀಯ ಜೀವನದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ದಿಯಾ ಕುಮಾರಿ 2013ರಲ್ಲಿ ರಾಜಸ್ಥಾನದ ಸವಾಯಿ ಮಾಧೋಪುರ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾದರು. ಅಲ್ಲಿಂದ ಅವರ ರಾಜಕೀಯ ಜೀವನ ಶುರುವಾಯಿತು. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಮೇಲೆ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ಕಡೆಗೆ ಆಸಕ್ತಿ ತೋರಿದರು. ಇದರಿಂದಲೇ 2019ರ ಲೋಕಸಭಾ ಚುನಾವಣೆಯಲ್ಲಿ ದಿಯಾ ರಾಜ್‌ಸಮಂದ್‌ ಕ್ಷೇತ್ರದಿಂದ ಸ್ಪರ್ಧಿಸಿ ಅತ್ಯಧಿಕ ಬಹುಮತದಿಂದ ಗೆದ್ದು ಸಂಸದರಾದರು. ಈ ಮೂಲಕ ರಾಷ್ಟ್ರ ರಾಜಕಾರಣ ಪ್ರವೇಶಿಸಿದರು

Exit mobile version