ಮಂಗಳೂರು: ಕಳೆದ ಎರಡು ಗಂಟೆಯಿಂದ ನಿರಂತರವಾಗಿ ಮಂಗಳೂರು ನಗರದಲ್ಲಿ ಮಳೆ ಸುರಿಯುತ್ತಿದ್ದು, ಮಳೆಗೆ ಮಂಗಳೂರಿನ ಪಂಪ್ವೆಲ್ ವೃತ್ತದಲ್ಲಿ ನೀರು ತುಂಬಿದೆ. ಪಂಪ್‌ವೆಲ್ ಫ್ಲೈಓವರ್ ಅಡಿಭಾಗ ಸಂಪೂರ್ಣ ಜಲಾವೃತವಾಗಿದೆ. ಮೇಲ್ಸೇತುವೆ ಅಡಿಭಾಗದಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಡಕು ಉಂಟಾಗಿದೆ. ನೀರು ತುಂಬಿರುವುದರಿಂದ ವಾಹನಗಳು ಸಾಗಲು ಸಾಧ್ಯವಾಗದೇ ಟ್ರಾಫಿಕ್ ಜಾಮ್ ಉಂಟಾಗಿದೆ.
ಭಾರೀ ಮಳೆಗೆ ಪಂಪ್ ವೆಲ್, ಕೊಟ್ಟಾರ ಚೌಕಿ, ಮಾಲೆಮಾರ್ ಪ್ರದೇಶ ಜಲಾವೃತವಾಗಿದ್ದು ವಾಹನ ಸವಾರರು ಪರದಾಡುವಂತಾಗಿದೆ. ನಗರದ ಬಿಜೈನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿ ಗಲೀಜು ನೀರು ಬ್ಯಾಂಕ್, ಮೆಡಿಕಲ್‌ನೊಳಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಇಂಡಿಯನ್ ಬ್ಯಾಂಕ್‌ನೊಳಗೆ ನೀರು ನುಗ್ಗಿ ಬ್ಯಾಂಕ್ ಸಿಬ್ಬಂದಿಗಳು ಕಡತ, ಪಕ್ಕದಲ್ಲಿದ್ದ ಎಟಿಎಂ ಮಷಿನ್‌ನಲ್ಲಿದ್ದ ಹಣವನ್ನು ಸ್ಥಳಾಂತರಿಸಿದ್ದಾರೆ. ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಮ್ಯಾನ್ ಹೋಲ್ ದುರಸ್ತಿಯಾಗುತ್ತಿದ್ದು ಇನ್ನು ಕೂಡ ಪೂರ್ಣವಾಗಿಲ್ಲ ಇದರಿಂದ ಮಳೆನೀರಿನೊಂದಿಗೆ ಗಲೀಜು ನೀರು ಹೋಟೆಲ್, ಬ್ಯಾಂಕ್ ಮಡಿಕಲ್ ಗೆ ನುಗ್ಗಿದೆ.
ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ತ : ಮಹಾಮಳೆಯಿಂದಾಗಿ ನಂತೂರು, ಪಡೀಲ್ ಪಂಪ್ ವೆಲ್ ಗಳಲ್ಲಿ ಹೆದ್ದಾರಿ ಬ್ಲಾಕ್ ಆಗಿದೆ. ಪಂಪ್‌ವೆಲ್‌ನಲ್ಲಿ ತೋಡು ತುಂಬಿ ಹರಿದು ಅಂಗಡಿ ಮುಂಗಟ್ಟು ಗಳಿಗೆ ನೀರು ನುಗ್ಗಿದೆ. ಅದೇ ರೀತಿ ಮಳೆಯಿಂದಾಗಿ ಪಂಪ್ ವೆಲ್ ನಿಂದ ಮಹಾಲಿಂಗೇಶ್ವರ ದೇವಳಕ್ಕೆ ಹೋಗುವ ದಾರಿಯಲ್ಲಿ ರಸ್ತೆ ಗೋಚರವಾಗದೆ ಕಾರೊಂದು ಚರಂಡಿಗೆ ಉರುಳಿದೆ. ನಂತೂರು ಸರ್ಕಲ್ ಎದುರು ರಸ್ತೆಗೆ ಮರ ಉರುಳಿಬಿದ್ದು ರಸ್ತೆ ಸಂಚಾರಕ್ಕೆ ತಡೆ ಉಂಟಾಗಿದೆ. ರಸ್ತೆ ಮರ ಉರುಳಿದ ಘಟನೆಗಳು ನಗರದ ಹಲವು ಭಾಗಗಳಲ್ಲಿ ಉಂಟಾಗಿದೆ.