ಮಂಗಳೂರು: ಕರಾವಳಿ ಸೇರಿದಂತೆ ರಾಜ್ಯದಲ್ಲಿ ಮುಂಗಾರು ಕೈಕೊಟ್ಟು ಕೆಲ ದಿನಗಳಾಗಿತ್ತು. ಆದರೆ ಮಂಗಳವಾರ ಬೆಳಗ್ಗೆ ಮಂಗಳೂರು ನಗರದಲ್ಲಿ ಭಾರಿ ಮಳೆಯಾಗಿದೆ. ಈ ನಡುವೆ ಅವೈಜ್ನಾನಿಕ ಚರಂಡಿ ಕಾಮಗಾರಿಯಿಂದಾಗಿ ತೊಕ್ಕೊಟ್ಟು ಹೆದ್ದಾರಿಯಲ್ಲಿ ಮಳೆ ನೀರು ತುಂಬಿ ಹರಿದು ಕೆಲ ಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ರಸ್ತೆಯಲ್ಲಿ ನೀರು ತುಂಬಿದ್ದರಿಂದ ವಾಹನ ಸವಾರರು ಪರದಾಡಿದರು. ಮಳೆಗಾಲದಲ್ಲಿ ಪ್ರತಿ ವರುಷವೂ ತೊಕ್ಕೊಟ್ಟು ಫ್ಲೈ ಓವರ್ ಕೆಳಗಡೆ ಮಳೆ ನೀರು ರಸ್ತೆಯಲ್ಲೇ ಹರಿದು ಕೃತಕ ನೆರೆ ವಾತಾವರಣ ಸೃಷ್ಟಿಯಾಗುತ್ತದೆ.
ಧಾರಾಕಾರ ಸುರಿದ ಮಳೆಗೆ ಉಳ್ಳಾಲ ನಗರ ವ್ಯಾಪ್ತಿಯ ಸೇವಂತಿ ಗುಡ್ಡೆ ಎಂಬಲ್ಲಿ ಜೋಸೆಫ್ ಡೇಸಾ ಅವರ ಮನೆಯ ಬೃಹತ್ ತಡೆಗೋಡೆ ಕುಸಿದು ಬಿದ್ದ ಪರಿಣಾಮ ಪಕ್ಕದ ವಿಷು ಶೆಟ್ಟಿ ಎಂಬುವರ ಮನೆಗೆ ಭಾಗಶಃ ಹಾನಿಯುಂಟಾಗಿದೆ. ಘಟನೆ ವೇಳೆ ವಿಷು ಅವರ ಪತ್ನಿ ಅಮಿತಾ ಮನೆಯಲ್ಲಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಸ್ಥಳೀಯ ನಗರಸಭಾ ಸದಸ್ಯ ಮುಶ್ತಾಕ್ ಪಟ್ಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.