ಕಡಬ: ಹೆಬ್ಬಾವೊಂದು ಆಡನ್ನು ಬೇಟೆಯಾಡಿ ನುಂಗಲು ಯತ್ನಿಸಿ ಕೊನೆಗೆ ಸಾಧ್ಯವಾಗದೆ ಬಿಟ್ಟು ಹೋದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತ್ತೂರು ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ಬ್ರಾಂತಿಕಟ್ಟೆ ಕೊಡೆಂಕಿರಿ ಎಂಬಲ್ಲಿ ಆಹಾರ ಅರಸಿ ನಾಡಿಗೆ ಬಂದ ಭಾರೀ ಗಾತ್ರದ ಹೆಬ್ಬಾವು ಆಡೊಂದನ್ನು ಬೇಟೆಯಾಡಿದೆ. ಹಿಡಿದ ಆಡನ್ನು ನುಂಗಲು ಸುಮಾರು ಒಂದು ತಾಸು ಸೆಣಸಿದೆ. ವಿಫಲ ಯತ್ನ ನಡೆಸಿ ನಂತರ ಸಾಧ್ಯವಾಗದೆ ಆಡನ್ನು ಅಲ್ಲಿಯೇ ಬಿಟ್ಟು ತೆರಳಿದೆ. ಗ್ರಾಮದ ಜಾರ್ಜ್ ಕುಟ್ಟಿ ಎಂಬವರಿಗೆ ಸೇರಿದ ಸುಮಾರು 45 ಕೆಜಿ ತೂಕದ ಗಂಡು ಆಡು ಹೆಬ್ಬಾವಿನ ಉರುಳಿಗೆ ಸಿಕ್ಕಿ ಉಸಿರುಗಟ್ಟಿ ಪ್ರಾಣ ಬಿಟ್ಟಿದೆ. ಬೇಟೆಯಾಡಿದ ಆಡಿನ ತಲೆಯ ಭಾಗವನ್ನು ನುಂಗಿದರೂ ಉಳಿದ ಭಾಗವನ್ನು ಹೆಬ್ಬಾವಿಗೆ ನುಂಗಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.