main logo

699 ರುಪಾಯಿಗೆ 10 ಸಿನಿಮಾ ನೋಡಿ, ಭರ್ಜರಿ ಆಫರ್‌ ನೀಡಿದ ಪಿವಿಆರ್ ಐನಾಕ್ಸ್​

699 ರುಪಾಯಿಗೆ 10 ಸಿನಿಮಾ ನೋಡಿ, ಭರ್ಜರಿ ಆಫರ್‌ ನೀಡಿದ ಪಿವಿಆರ್ ಐನಾಕ್ಸ್​

ನವದೆಹಲಿ: ಭಾರತದಲ್ಲಿ ವಾರಾಂತ್ಯದಲ್ಲಿ ಚಿತ್ರಮಂದಿರಗಳು ತುಂಬಿತುಳುಕುತ್ತಿರುತ್ತವೆ. ವಾರದ ದಿನಗಳಲ್ಲಿ ಹೆಚ್ಚು ಮಂದಿ ಜನರು ಥಿಯೇಟರ್ ಕಡೆಗೆ ಹೋಗುವುದಿಲ್ಲ. ಈ ಸಮಸ್ಯೆ ನಿವಾರಿಸಲು ಪಿವಿಆರ್ ಐನಾಕ್ಸ್ ಹೊಸ ಪ್ಲಾನ್ ಮಾಡಿದೆ. ಭಾರತದ ಅತಿದೊಡ್ಡ ಸಿನಿಮಾ ಪ್ರದರ್ಶಕ ಸಂಸ್ಥೆಯಾದ ಪಿವಿಆರ್ ಐನಾಕ್ಸ್ ಇದೀಗ ಮಾಸಿಕ ಸಬ್​ಸ್ಕ್ರಿಪ್ಷನ್ ಪ್ಲಾನ್ ಘೋಷಿಸಿದ್ದು, ನಿರ್ದಿಷ್ಟ ಶುಲ್ಕಕ್ಕೆ 10 ಸಿನಿಮಾಗಳನ್ನು ನೋಡುವ ಅವಕಾಶ ನೀಡಿದೆ. ಪಿವಿಆರ್ ಐನಾಕ್ಸ್ ಪಾಸ್​ಪೋರ್ಟ್ ಎಂದು ಕರೆಯಲಾಗುವ ಈ ಸಬ್​ಸ್ಕ್ರಿಪ್ಷನ್ ಪ್ಲಾನ್​ಗೆ ತಿಂಗಳಿಗೆ ಸದ್ಯ ಕೇವಲ 699 ರೂ ಮಾತ್ರವೇ ಶುಲ್ಕ ಇದೆ. ಇಂದಿನಿಂದಲೇ (ಅ. 16) ಈ ಸಬ್ಸ್​ಕ್ರಿಪ್ಷನ್ ಪ್ಲಾನ್ ಚಾಲನೆಗೆ ಬರುತ್ತದೆ.

ಚಿತ್ರಗಳು ಬಿಡುಗಡೆ ಆಗುವ ದಿನವಾದ ಶುಕ್ರವಾರ ಹಾಗೂ ವಾರಾಂತ್ಯದ ಎರಡು ದಿನಗಳಾದ ಶನಿವಾರ ಮತ್ತು ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಈ ಸಬ್​ಸ್ಕ್ರಿಪ್ಷನ್ ಪ್ಲಾನ್ ಪ್ರಕಾರ ಚಿತ್ರಗಳನ್ನು ನೋಡಬಹುದು. ಅಂದರೆ, ಸೋಮವಾರದಿಂದ ಗುರುವಾರದವರೆಗೂ ವಾರದಲ್ಲಿ ನಾಲ್ಕು ದಿನಗಳ ಕಾಲ ಪಿವಿಆರ್ ಐನಾಕ್ಸ್ ಪಾಸ್​ಪೋರ್ಟ್ ಪ್ಲಾನ್ ಪ್ರಕಾರ ಸಿನಿಮಾ ನೋಡಬಹುದು. ಹಾಗೆಯೇ, ಐಮ್ಯಾಕ್ಸ್, ಗೋಲ್ಡ್, LUXE, ಡೈರೆಕ್ಟರ್ಸ್ ಕಟ್ ಇತ್ಯಾದಿ ಪ್ರೀಮಿಯಮ್ ವಿಭಾಗದ ಸೀಟುಗಳನ್ನು ಪಡೆಯಲು ಆಗುವುದಿಲ್ಲ.

ಪಿವಿಆರ್ ಐನಾಕ್ಸ್ ಸಂಸ್ಥೆಯ ಸಹ-ಸಿಇಒ ಆಗಿರುವ ಗೌತಮ್ ದತ್ತ ಈ ಸಬ್​ಸ್ಕ್ರಿಪ್ಷನ್ ಪ್ಲಾನ್ ಜಾರಿ ಮಾಡುವ ಆಲೋಚನೆ ಹೇಗೆ ಬಂತು ಎಂಬುದಕ್ಕೆ ಕುತೂಹಲದ ಉತ್ತರ ಕೊಡುತ್ತಾರೆ. ಜನರು ದೊಡ್ಡ ಸ್ಟಾರ್​ಗಳ ಸಿನಿಮಾವನ್ನು ಥಿಯೆಟರ್​ನಲ್ಲಿ ನೋಡಲು ಇಷ್ಟಪಡುತ್ತಾರೆ. ಟಿಕೆಟ್ ಬೆಲೆ ದುಬಾರಿಯಾದ್ದರಿಂದ ಪ್ರತೀ ವಾರವೂ ಥಿಯೇಟರ್​ಗೆ ಜನರು ಬರುವುದಕ್ಕೆ ಹಿಂದೇಟು ಹಾಕುತ್ತಿರುವ ಸಂಗತಿ ಗೊತ್ತಾದ ಬಳಿಕ ಈ ಪ್ಲಾನ್ ಮಾಡಿದ್ದಾಗಿ ದತ್ತ ಹೇಳುತ್ತಾರೆ.

‘ಸಿನಿಮಾ ಅನುಭವ ಇಷ್ಟವಾಗುತ್ತದೆ. ಆದರೆ, ಎಲ್ಲವನ್ನೂ ನೋಡಲು ಆಗುವುದಿಲ್ಲ. ಈವೆಂಟ್ ಫಿಲಂಗಳು ಯಾವುವು, ಟಿವಿ, ಐಪ್ಯಾಡ್, ಮೊಬೈಲ್​ನಲ್ಲಿ ನೋಡಬಹುದಾದ ಸಿನಿಮಾಗಳು ಯಾವುವು ಎಂಬುದನ್ನು ಜನರು ಅವಲೋಕಿಸುತ್ತಿರುತ್ತಾರೆ. ಅವರಿಗೆ ಪಠಾಣ್, ಜವಾನ್, ಸಲಾರ್, ಲಿಯೋ ಇತ್ಯಾದಿ ದೊಡ್ಡ ಸಿನಿಮಾಗಳು. ಇನ್ನೂ ಕೆಲ ಸಿನಿಮಾಗಳನ್ನು ನೋಡಲು ಇಷ್ಟವಾದರೂ ಸುಮ್ಮನಾಗುತ್ತಾರೆ.

‘ನೀವ್ಯಾಕೆ ಪ್ರತೀ ವಾರ ಸಿನಿಮಾಗೆ ಬರಬಾರದು ಎಂದು ನಾವು ಅವರನ್ನು ಕೇಳಿದಾಗ, ಪ್ರತೀ ವಾರ ಥಿಯೇಟರ್​ಗೆ ಬರುವುದು ದುಬಾರಿ ಆಗಿಹೋಗುತ್ತದೆ ಎಂಬ ಉತ್ತರ ಬಂದಿತು. ಈ ರೀತಿಯ ಟ್ರೆಂಡ್ ನಮ್ಮ ಚಿತ್ರೋದ್ಯಮದ ಆರೋಗ್ಯಕ್ಕೆ ತರವಲ್ಲ. ಅದರಲ್ಲೂ ಮಧ್ಯಮ ಮತ್ತು ಸಣ್ಣ ಬಜೆಟ್​ನ ಚಿತ್ರಗಳಿಗೆ ಹೊಡೆತ ಬೀಳುತ್ತದೆ’ ಎಂದು ಗೌತಮ್ ದತ್ತ ವಿವರ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!