ಪುತ್ತೂರು: ಆ. 24ರ ಗುರುವಾರದಂದು ಇಲ್ಲಿನ ಮಹಿಳಾ ಪೊಲೀಸ್ ಠಾಣಾ ಬಳಿ ತನ್ನ ಮಾಜಿ ಪ್ರೇಯಸಿಯನ್ನು ಕತ್ತು ಸೀಳಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದೇ ಮಾಹಿತಿಗಳು ಇದೀಗ ಬಯಲಾಗುತ್ತಿದೆ.
ಕೊಲೆ ಮಾಡುವುದಕ್ಕೂ ಮೊದಲು ಯುವತಿ ಕೆಲಸ ಮಾಡುತ್ತಿದ್ದ ಶಾಪ್ ಗೆ ಬಂದಿದ್ದ ಹಂತಕ ಅಲ್ಲಿ ಆಕೆಯೊಂದಿಗೆ ಜಗಳವಾಡಿದ್ದ. ಇದರ ಸಿಸಿ ದೃಶ್ಯಾವಳಿ ಇದೀಗ ಲಭ್ಯವಾಗಿದೆ.
ಯುವತಿ ಗೌರಿ ಕೆಲಸಮಾಡುತ್ತಿದ್ದ ಇಲ್ಲಿನ ಬಸ್ ನಿಲ್ದಾಣದ ಬಳಿಯಲ್ಲಿರುವ ಬಟ್ಟೆ ಶಾಪ್ ಗೆ ಬಂದು ಅಲ್ಲಿ ಆಕೆಯೊಂದಿಗೆ ಜಗಳವಾಡಿ ಆಕೆಯನ್ನು ಆರೋಪಿ ಪದ್ಮರಾಜ್ ಎಳೆದಾಡುತ್ತಿರುವ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ.
ಆ ಬಳಿಕ ಯುವತಿಯ ಮೊಬೈಲ್ ಕಸಿದುಕೊಂಡು ಆರೋಪಿ ಅಲ್ಲಿಂದ ಹೊರ ಹೋಗಿದ್ದ. ಬಳಿಕ ತನ್ನ ಮೊಬೈಲನ್ನು ವಾಪಾಸು ಕೇಳಲು ಗೌರಿ ಪದ್ಮರಾಜ್ ಗೆ ಕಾಲ್ ಮಾಡಿದ್ದಾಳೆ.
ಕಾಲ್ ಮಾಡಿ ಆರೋಪಿಯನ್ನು ಮಹಾಲಿಂಗೇಶ್ವರ ದೇವಸ್ಥಾನದ ಕೆರೆ ಬಳಿ ಬರುವಂತೆ ತಿಳಿಸಿದ್ದಾಳೆ. ಈ ಸಂದರ್ಭದಲ್ಲಿ ಮಾಣಿ ಕಡೆ ತೆರಳಿದ್ದ ಆರೊಪಿ ಪದ್ಮರಾಜ್ ವಾಪಾಸು ಯುವತಿ ಹೇಳಿದ ಜಾಗಕ್ಕೆ ಬಂದಿದ್ದ.
ಇಲ್ಲಿ ಮತ್ತೆ ಇವರಿಬ್ಬರ ನಡುವೆ ಜಗಳ ನಡೆದಿದ್ದು ಈ ಸಂದರ್ಭದಲ್ಲಿ ಆರೋಪಿ ಪದ್ಮರಾಜ್ ಗೌರಿಯ ಕುತ್ತಿಗೆಗೆ ಇರಿದಿದ್ದಾನೆ.
ಈ ಸಂದರ್ಭದಲ್ಲಿಗಂಭೀರವಾಗಿ ಗಾಯಗೊಂಡಿದ್ದ ಗೌರಿ ಬಳಿಕ ಮಂಗಳೂರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾಳೆ.