newsroomkannada.com

ಪುತ್ತೂರು ಶಾಸಕರ ಜನತಾ ದರ್ಶನ – ಸರತಿ ಸಾಲಿನಲ್ಲೇ ನಿಂತು ಮನವಿ ಸಲ್ಲಿಸಿದ ಸಹೋದರಿ!

ಪುತ್ತೂರು: ಇವತ್ತಿನ ರಾಜಕೀಯ ಪರಿಸ್ಥಿತಿ ಹೇಗಿದೆ ಎಂದರೆ, ಪತ್ನಿ ಪಂಚಾಯತ್ ಅಧ್ಯಕ್ಷೆಯಾದರೆ ಆಕೆಯ ಪತಿಯೇ ಅಧಿಕಾರ ಚಲಾಯಿಸುವ ಸ್ಥಿತಿ ಇದೆ. ಇನ್ನು ತಮ್ಮ ಕುಟುಂಬದಲ್ಲಿ ಯಾರಾದರೂ ಶಾಸಕರು ಅಥವಾ ಮಂತ್ರಿಗಳಾದರೆ ತಮಗೇ ಲಾಟರಿ ಹೊಡೆದಂತೆ ಎಂದು ಭಾವಿಸುವವರೇ ಅಧಿಕ.

ಆದರೆ, ಇದಕ್ಕೆ ಕೆಲವರು ಅಪವಾದವಾಗಿರುತ್ತಾರೆ, ತಾವು ಅಧಿಕಾರದಲ್ಲಿದ್ದರೂ ತಮ್ಮ ಕುಟುಂಬ ಸದಸ್ಯರು ಯಾರೂ ಇದರ ದುರುಪಯೋಗವನ್ನು ಮಾಡದಂತೆ ಎಚ್ಚರಿಕೆಯಿಂದ ವ್ಯವಹರಿಸುತ್ತಾರೆ.

ಇದಕ್ಕೊಂದು ಉತ್ತಮ ಉದಾಹರಣೆಯೆಂಬಂತೆ ಪುತ್ತೂರು ಕ್ಷೇತ್ರದ ಶಾಸಕರಾಗಿರುವ ಅಶೋಕ್ ಕುಮಾರ್ ರೈ (Ashok Kumar Rai) ಅವರು ಜನಸಂಪರ್ಕ ಮತ್ತು ಜನಸ್ಪಂದನೆ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿದ್ದಾರೆ.

ತನ್ನ ಕಚೇರಿಯಲ್ಲಿ ಮತ್ತು ತಾನು ಹೋದ ಕಡೆಗಳಲ್ಲೆಲ್ಲಾ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸುವುದಕ್ಕೆ ಆದ್ಯತೆ ನೀಡುವ ಶಾಸಕ ಅಶೋಕ್ ರೈ ಅವರು ಶನಿವಾರದಂದು (ಸೆ.30) ತಮ್ಮ ಕಚೇರಿಯಲ್ಲಿ ಜನತಾ ದರ್ಶನ ನಡೆಸುತ್ತಿದ್ದ ಸಂದರ್ಭದಲ್ಲಿ ಅವರ ಸಹೋದರಿ ನಳಿನಿ ಶೆಟ್ಟಿ (Nalini Shetty) ಸಹ ಶಾಸಕರನ್ನು ಭೇಟಿಯಾಗಲು ಬಂದಿದ್ದರು.
ಈ ಸಂದರ್ಭದಲ್ಲಿ ಶಾಸಕರನ್ನು ಭೇಟಿಯಾಗಲು ಬಂದಿರುವ ಸಾರ್ವಜನಿಕರೂ ಹೆಚ್ಚಿನ ಸಂಖ್ಯೆಯಲ್ಲಿದ್ದರು. ತನ್ನ ಸಹೋದರಿ ತನಗಾಗಿ ಕಾಯುತ್ತಿದ್ದಾರೆ ಎಂಬ ವಿಚಾರ ಶಾಸಕರಿಗೆ ಗೊತ್ತಿತ್ತು. ಆದರೆ, ಶಾಸಕರು ತನ್ನ ಸಹೋದರಿಯನ್ನು ಕರೆಯಲಿಲ್ಲ.
ಇನ್ನೊಂದೆಡೆ, ‌ಸರತಿ ಸಾಲಿನಲ್ಲೇ ಬಂದ ನಳಿನಿ ಶೆಟ್ಟಿಯವರು ತಾವು ತಂದಿದ್ದ ಅರ್ಜಿಯನ್ನು ಶಾಸಕರಿಗೆ ಸಲ್ಲಿಸಿ ಅಲ್ಲಿಂದ ತೆರಳಿದರು.‌ ಈ ವಿಚಾರದಲ್ಲಿ ಶಾಸಕರು ಮತ್ತು ಅವರ ಸಹೋದರಿ ನಳಿನಿ ಶೆಟ್ಟಿ ಅವರ ನಡೆ ನಡೆ ಅಲ್ಲಿದ್ದವರ ಮೆಚ್ಚುಗೆಗೆ ಪಾತ್ರವಾಯಿತು.

Exit mobile version