Site icon newsroomkannada.com

ಪುತ್ತೂರು: ಗೆಲುವಿನ ವಿಶ್ವಾಸದಲ್ಲಿ ಪುತ್ತಿಲ ಪರಿವಾರ ಸದಸ್ಯರು

ಪುತ್ತೂರು: ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಗೆ ಟಕ್ಕರ್‌ ಕೊಟ್ಟಿದ್ದ ಪುತ್ತಿಲ ಪರಿವಾರ ಬೆಂಬಲಿತರು ಗ್ರಾಪಂ ಉಪಚುನಾವಣೆಯಲ್ಲಿಯೂ ಜಯಭೇರಿ ಬಾರಿಸುವ ವಿಶ್ವಾಸದಲ್ಲಿದ್ದಾರೆ.
ನಿಡ್ಪಳ್ಳಿ ಮತ್ತು ಆರ್ಯಾಪು ಗ್ರಾಮಪಂಚಾಯತ್ ನ ತಲಾ ಒಂದು ಸ್ಥಾನಕ್ಕೆ ನಡೆದ ಉಪ ಚುನಾವಣೆಗಳಲ್ಲಿ ಪುತ್ತಿಲ ಪರಿವಾರ ಸದಸ್ಯರು ಸ್ಪರ್ಧೆ ಮಾಡಿದ್ದಾರೆ. ಚುನಾವಣೋತ್ತರ ಟ್ರೆಂಡ್‌ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಪುತ್ತಿಲ ಪರಿವಾರದ ಶ್ರೀ ಕೃಷ್ಣ ಉಪಾಧ್ಯ, ಇವತ್ತು ( ಜುಲೈ 23ರಂದು) ಎರಡು ಕಡೆಗಳಲ್ಲಿ ಉಪಚುನಾವಣೆ. ನಾನು ನಿಡ್ಲಪಳ್ಳಿಯಲ್ಲಿ ಫೀಲ್ಡ್‌ ವರ್ಕ್‌ ಮಾಡಿಲ್ಲ. ಆದರೆ ಆರ್ಯಾಪುವಿನಲ್ಲಿ ಮಾಡಿದ್ದೇನೆ. ಆರ್ಯಾಪುವಿನ ಸಮೀಕ್ಷೆ ಪಕ್ಕಾ ಇದೆ. ನಿಡ್ಪಳ್ಳಿಯಲ್ಲೂ ಮೊನ್ನೆ ಎಲೆಕ್ಷನ್‌ ನಲ್ಲಿ ನಮಗೆ ಲೀಡ್‌ ಇತ್ತು. ಹಾಗಾಗಿ ಈವಾಗ್ಲೂ ಹೋಪ್‌ ಇದೆ. ನೋಡೋಣ ಭಗವಂತನ ಲೆಕ್ಕಾಚಾರ ಹೇಗಿದೆ ಅಂತಾ ಎಂದು ಬರೆದುಕೊಂಡಿದ್ದಾರೆ.

ಪುತ್ತಿಲ ಪರಿವಾರ ಮುಖಂಡರ ಅಭಿಪ್ರಾಯವೇನು: ವಿಧಾನ ಸಭೆ ಬಳಿಕ ಗ್ರಾಪಂ ಉಪಚುನಾವಣೆಗಳಲ್ಲಿಯೂ ಪರಿವಾರ ಬೆಂಬಲಿತರ ಸ್ಪರ್ಧೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪುತ್ತಿಲ ಪರಿವಾರ ಮುಖಂಡರು ಕಾರ್ಯಕರ್ತರ ಒತ್ತಾಯದ ಮೇರೆಗೆ ಚುನಾವಣೆಗೆ ಸ್ಪರ್ಧೆ ನಡೆಯುತ್ತಿದೆ. ಹಿಂದುತ್ವಕ್ಕಾಗಿ ಹೋರಾಡಿದ ಅರುಣ್ ಕುಮಾರ್‌ ಪುತ್ತಿಲ ಅವರಿಗೆ ಈ ಹಿಂದೆಯೂ ಬಿಜೆಪಿ ಅನ್ಯಾಯ ಮಾಡಿದೆ. ಮಾಜಿ ಶಾಸಕ ಸಂಜೀವ ಮಠಂದೂರು ಹಿಂದೆ ಬಿಜೆಪಿ‌ ಜಿಲ್ಲಾಧ್ಯಕ್ಷ ಆಗಿದ್ದಾಗಲೂ ಅರುಣ್ ಪುತ್ತಿಲ ಬೆಂಬಲಿಗರು ಅವರನ್ನು ಬೆಂಬಲಿಸಿದ್ದರು. ಅಲ್ಲದೆ ಸಂಜೀವ ಮಠಂದೂರು ಶಾಸಕ‌ ಸ್ಥಾನಕ್ಕೆ ಸ್ಪರ್ಧಿಸಿದಾಗಲೂ ಅವರಿಗೆ ಬೆಂಬಲ ನೀಡಿದ್ದರು. ಆದರೆ ಅರುಣ್ ಪುತ್ತಿಲರಿಗೆ ಪಕ್ಷದಲ್ಲಿ ಈವರೆಗೂ ಸ್ಥಾನಮಾನ ನೀಡಿಲ್ಲ. ಜವಾಬ್ದಾರಿ ನೀಡುವಂತಹ‌ ಮನೋಭಾವವೂ ಅವಲ್ಲಿ‌ ಕಾಣುತ್ತಿಲ್ಲ. ಸ್ಥಾನಮಾನ ಸಿಗುವವರೆಗೂ ಇದೇ ರೀತಿ ಚುನಾವಣೆಗೆ ಸ್ಪರ್ಧಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ. ಇದು ಬಿಜೆಪಿಗೆ ಸೆಡ್ಡು ಹೊಡೆಯುವ, ಬಿಜೆಪಿಗೆ ಪರ್ಯಾಯವಾಗಿ ಸ್ಪರ್ಧೆಯಲ್ಲ. ಆದರೆ ನಮ್ಮ ಗುರಿ ಹಿಂದುತ್ವದ ಆಧಾರದಲ್ಲಿ ಕೆಲಸ ಮಾಡಬೇಕು ಎಂಬುದು. ಕಾರ್ಯಕರ್ತರ ಆಶಯಕ್ಕೆ ಬೆಲೆಕೊಡಬೇಕು ನಮ್ಮ ಒತ್ತಾಯ. ಅದರ ಹೊರತು ಬಿಜೆಪಿಗೆ ಪರ್ಯಾಯವಾಗಿ ನಮ್ಮ ಮುಖಂಡರು ಸ್ಪರ್ಧೆ ಮಾಡುತ್ತಿಲ್ಲ ಎಂದು ಪರಿವಾರ ಮುಖಂಡರು ಹೇಳಿದ್ದಾರೆ.

ಕಾಂಗ್ರೆಸ್‌ ಮುಖಂಡರ ಹೇಳೋದೇನು: ಕಾಂಗ್ರೆಸ್‌ ಜಯಗಳಿಸುವ ಸಾಧ್ಯತೆ ಅಧಿಕವಾಗಿದೆ. ಎರಡೂ ಸಂಘಟನೆಗಳ ಬೆಂಬಲಿತರ ನಡುವಿನ ಜಿದ್ದಾಜಿದ್ದಿಯಿಂದ ಕಾಂಗ್ರೆಸ್‌ ಬೆಂಬಲಿತರಿಗೆ ಖಂಡಿತವಾಗಿಯೂ ಜಯ ದೊರೆಯಲಿದೆ. ನಮ್ಮ ಸಂಘಟನೆ ಬಲಿಷ್ಠವಾಗಿದ್ದು, ಜಯ ಸಾಧ್ಯತೆ ಅಧಿಕವಾಗಿದೆ ಎಂದು ಕಾಂಗ್ರೆಸ್‌ ಮುಖಂಡ ಶಿವನಾಥ್‌ ರೈ ತಿಳಿಸಿದ್ದಾರೆ.

ಬಿಜೆಪಿ ನಾಯಕರ ಪ್ರತಿಕ್ರಿಯೆ ಹೀಗೆ: ಬಿಜೆಪಿ ಉಪಚುನಾವಣೆಗಳಲ್ಲಿ ಜಯಸಾಧಿಸಲಿದೆ ಎಂಬುದು ಬಿಜೆಪಿ ನಾಯಕರ ಅಭಿಪ್ರಾಯ. ಬಿಜೆಪಿಗೆ ಸಂಘಟನಾತ್ಮಕವಾಗಿ ಹೋರಾಟ ನಡೆಸಿದ್ದು, ಹೀಗಾಗಿ ಪಕ್ಷ ಬೆಂಬಲಿತರು ಜಯಗಳಿಸಲಿದ್ದಾರೆ ಎಂದು ಮುಖಂಡರು ತಿಳಿಸಿದ್ದಾರೆ.

Exit mobile version