main logo

ಬಿ.ಎಲ್‌ ಸಂತೋಷ್‌ ಭೇಟಿಯಾದ ಪುತ್ತಿಲ: ರಹಸ್ಯ ಸಭೆಯಲ್ಲಿ ಸಂತೋಷ್‌ ನೀಡಿದ ಸಲಹೆ ಏನು?

ಬಿ.ಎಲ್‌ ಸಂತೋಷ್‌ ಭೇಟಿಯಾದ ಪುತ್ತಿಲ: ರಹಸ್ಯ ಸಭೆಯಲ್ಲಿ ಸಂತೋಷ್‌ ನೀಡಿದ ಸಲಹೆ ಏನು?

ಮಂಗಳೂರು: ಬಿಜೆಪಿ, ಸಂಘ ಪರಿವಾರದ ಪ್ರಯೋಗಶಾಲೆ ಎಂದು ಗುರುತಿಸಿಕೊಂಡಿರುವ ಪುತ್ತೂರಿನಲ್ಲಿ ವಿಧಾನಸಭಾ ಚುನಾವಣೆ ಬಳಿಕ ಹಲವು ಬೆಳವಣಿಗೆಗಳು ನಡೆಯುತ್ತಿವೆ. ಅದರಲ್ಲಿಯೂ ಹಿಂದು ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಸವಾಲೊಡ್ಡುವ ಮೂಲಕ ಬಿಜೆಪಿ ಮುಖಂಡರಿಗೆ ಸರಿಯಾಗಿಯೇ ಪಾಠ ಕಲಿಸಿದ್ದರು. ಈ ನಿಟ್ಟಿನಲ್ಲಿ ಇದೀಗ ಬಿಜೆಪಿ ಮುಖಂಡರು ‌ಒಡೆದ ಮನೆಯಂತಾಗಿರುವ ಪುತ್ತೂರು ಬಿಜೆಪಿ, ಹಿಂದು ಸಂಘಟನೆಗಳ ಭಿನ್ನಮತ ಶಮನಕ್ಕೆ ಮುಂದಾಗಿದ್ದಾರೆ. ಪುತ್ತೂರಿನಲ್ಲಿ ಬಿಜೆಪಿ ಪಕ್ಷಕ್ಕೆ ಭಾರಿ ಸವಾಲು ಒಡ್ಡಿದ್ದ ಹಿಂದುತ್ವದ ಫೈರ್‌ ಬ್ರ್ಯಾಂಡ್‌ ಅರುಣ್‌ ಪುತ್ತಿಲ ಅವರನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ‌.ಎಲ್ ಸಂತೋಷ್ ದೆಹಲಿಗೆ ಕರೆಸಿ ರಹಸ್ಯ ಸಭೆ ನಡೆಸಿದ್ದಾರೆ.

ಪುತ್ತಿಲ ಪರಿವಾರದ ಜೊತೆ ಬಿ.ಎಲ್ ಸಂತೋಷ್, ಎರಡು ಗಂಟೆಗೂ ಅಧಿಕ ಕಾಲ ಸಭೆಯ ನಡೆಸಿದ್ದಾರೆ. ಸಭೆಯಲ್ಲಿ ಸಂತೋಷ್, ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಪುತ್ತೂರಿನಲ್ಲಿ ಚುನಾವಣಾ ಪೂರ್ವದಲ್ಲಿ ಬಿಜೆಪಿ ಯಲ್ಲಾದ ಬೆಳವಣಿಗೆಯ ಬಗ್ಗೆಯೂ ಅರುಣ್ ಕುಮಾರ್ ಪುತ್ತಿಲ ಅವರಲ್ಲಿ ಸಂತೋಷ್ ಪಡೆದುಕೊಂಡಿದ್ದಾರೆ.

ಪುತ್ತೂರಾಯ, ರಾಜರಾಮ್‌ ಭಾಗಿ: ದೆಹಲಿಯ ಬಿ.ಎಲ್ ಸಂತೋಷ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಅರುಣ್ ಕುಮಾರ್ ಪುತ್ತಿಲ, ಭಾಸ್ಕರ್ ಆಚಾರ್ಯ ಹಿಂದಾರು, ಪುತ್ತೂರಿನ ಖ್ಯಾತ ವೈದ್ಯ ಹಾಗೂ ಪುತ್ತಿಲ ಪರಿವಾರದ ಡಾ. ಸುರೇಶ್ ಪುತ್ತೂರಾಯ, ಉದ್ಯಮಿ ಗಣೇಶ್ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಪುತ್ತಿಲ ಪರ ಬ್ಯಾಟ್ ಬೀಸಿದ ರಾಜರಾಮ್ ಬಿ.ಎಲ್ ಪಾಲ್ಗೊಂಡಿದ್ದಾರೆ.

ಬಿಜೆಪಿ ವಿರುದ್ಧ ಹೇಳಿಕೆ ನೀಡದಂತೆ ಸಲಹೆ: ಅರುಣ್ ಕುಮಾರ್ ಪುತ್ತಿಲ ಬಳಿ ಸಂತೋಷ್, ಬಿಜೆಪಿಯ ಸದಸ್ಯತ್ವ ಪಡೆದು ಬಿಜೆಪಿಯಲ್ಲಿ ಸಕ್ರಿಯರಾಗಿ ಹಳೆಯದನ್ನು ಮರೆತು ಪಕ್ಷ ಕಟ್ಟಲು ಅರುಣ್ ಕುಮಾರ್ ಪುತ್ತಿಲ ಬಳಿ ಸಂತೋಷ್ ಸಹಕಾರ ಕೇಳಿದ್ದಾರೆ. ಬಿಜೆಪಿ ವಿರುದ್ಧವಾದ ಭಾಷಣಗಳನ್ನು ಮಾಡದೇ ಹಿಂದುತ್ವದ ಮೂಲಮಂತ್ರವನ್ನು ಜಪಿಸಿ, ಮಾಧ್ಯಮಗಳಲ್ಲಿ ಹೇಳಿಕೆ ನೀಡುವಾಗ ಸಮಾಜಕ್ಕೆ ತಪ್ಪು ಸಂದೇಶ ಹೋಗದಂತೆ ಎಚ್ಚರ ವಹಿಸಿ ಎಂದು ಅರುಣ್ ಕುಮಾರ್ ಪುತ್ತಿಲ ಅವರಿಗೆ ಸಂತೋಷ್ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಪುತ್ತೂರು ಬಿಜೆಪಿ ಭದ್ರಕೋಟೆ ಮತ್ತು ಸಂಘದ ನೆಲೆಯಲ್ಲೂ ಶಕ್ತಿ ಕೇಂದ್ರ ಆಗಿರುವ ಕಾರಣದಿಂದ ಪುತ್ತೂರಿನಲ್ಲಿ ಕಾರ್ಯಕರ್ತರನ್ನು ಒಂದುಗೂಡಿಸುವ ಬಗ್ಗೆ ಅರುಣ್ ಕುಮಾರ್ ಪುತ್ತಿಲ ಬಳಿ ಸಂತೋಷ್ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ.

Related Articles

Leave a Reply

Your email address will not be published. Required fields are marked *

error: Content is protected !!