ಪುಂಗನೂರು ವಿಶ್ವದ ಅತ್ಯಂತ ಚಿಕ್ಕ ಹಸುಗಳಲ್ಲಿ ಒಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಹಸುವಿನ ಜೊತೆ ಹಲವು ಬಾರಿ ಕಾಣಿಸಿಕೊಂಡಿದ್ದಲ್ಲದೆ ಪ್ರಧಾನಿ ನಿವಾಸದಲ್ಲಿಯೂ ಈ ವಿಶೇಷ ಹಸುಗಳನ್ನು ಸಾಕಲಾಗಿದೆ. ವಿಶೇಷವೆಂದರೆ ಪುಂಗನೂರು ಗೋವು ವೇದಕಾಲದಿಂದಲೂ ಇದೆ. ಪುಂಗನೂರು ಹಸುವಿನ ಪೌರಾಣಿಕ ಕಥೆಯು ಮಹರ್ಷಿ ವಿಶ್ವಾಮಿತ್ರನೊಂದಿಗೆ ಸಹ ಸಂಬಂಧಿಸಿದೆ. ವಿಶೇಷವಾಗಿ ಇದರ ಹಾಲು ಅಮೃತದಂತೆ ಎಂದು ಹೇಳಲಾಗುತ್ತದೆ.
ಪ್ರಸ್ತುತ ಪ್ರಪಂಚದಲ್ಲಿ ಈ ತಳಿಯ ಹಸುಗಳು ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಇವೆ. ಆದರೆ ಇದು ವಿಶ್ವದ ಅತ್ಯಂತ ದುಬಾರಿ ಹಸುಗಳಲ್ಲಿ ಒಂದು. 2.5 ಅಡಿಯ ಈ ಹಸು ಲಕ್ಷ ಬೆಲೆ ಬಾಳುತ್ತದೆ. ಹಾಗಾದರೆ ಈ ಹಸುವಿನ ವಿಶೇಷತೆ ಏನು ಮತ್ತು ಅದನ್ನು ಚಿನ್ನದ ಗಣಿ ಎಂದು ಏಕೆ ಕರೆಯುತ್ತಾರೆ ಎಂಬುದನ್ನು ತಿಳಿಯೋಣ.
ಈ ಹಸು ಹೆಚ್ಚಾಗಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪುಂಗನೂರು ಪ್ರದೇಶದಲ್ಲಿ ಕಂಡುಬರುತ್ತದೆ. ಆದುದರಿಂದ ಇದಕ್ಕೆ ಪುಂಗನೂರು ಎಂದು ಹೆಸರು ಬಂತು. ನೋಟದಲ್ಲಿ ಚಿಕ್ಕದಾಗಿ ಕಾಣುವ ಮೂಲಕ ಕರು ಎಂದು ಅನಿಸಿದರೂ ಇದರ ದೇಹ ರಚನೆ ನೋಡಿದರೆ ಪುಂಗನೂರು ಎಂದು ಗೊತ್ತಾಗುತ್ತದೆ. ಇದರ ಹಾಲು ತುಂಬಾ ಗಟ್ಟಿಯಾಗಿರುತ್ತದೆ. ಇದಲ್ಲದೆ ಇದು ಇತರ ಹಸುಗಳಿಗಿಂತ ಹೆಚ್ಚು ಬೆಣ್ಣೆಯನ್ನು ಉತ್ಪಾದಿಸುತ್ತದೆ.
ಪುಂಗನೂರು ಹಸುಗಳು ಸಾಮಾನ್ಯ ಹಸುಗಳಿಗಿಂತ ತುಂಬಾ ಚಿಕ್ಕದಾಗಿವೆ. ಈ ಚಿಕ್ಕ ಪುಂಗನೂರು ಹಸುಗಳ ಎತ್ತರ 70 ರಿಂದ 90 ಸೆಂ ಮತ್ತು ತೂಕ 115 ಕೆಜಿಯಿಂದ 200 ಕೆಜಿ ವರೆಗೆ ಇರುತ್ತದೆ. ಈ ಹಸು ದಿನಕ್ಕೆ 3 ಲೀಟರ್ ವರೆಗೆ ಹಾಲು ನೀಡುತ್ತದೆ. ಚಿಕ್ಕ ಪುಂಗನೂರು ಹಸುಗೆ ಹೋಲಿಸಿದರೆ ಪ್ರಸಿದ್ಧ ಓಂಗೋಲ್ ಬುಲ್ನ ಉದ್ದವು 1.70 ಮೀಟರ್ ಇರುತ್ತದೆ ಮತ್ತು ತೂಕವು 500 ಕಿಲೋಗ್ರಾಂ ಇರುತ್ತದೆ. ಎರಡೂ ಜಾನುವಾರುಗಳ ಮೂಲ ಆವಾಸಸ್ಥಾನ ಆಂಧ್ರ ಪ್ರದೇಶವಾಗಿದೆ. ಚಿತ್ತೂರು ಜಿಲ್ಲೆಯ ಪಲಮನೇರ್‌ನಲ್ಲಿರುವ ಜಾನುವಾರು ಸಂಶೋಧನಾ ಕೇಂದ್ರದ ಪ್ರಕಾರ, ಚಿತ್ತೂರು ಜಿಲ್ಲೆ ಈ ಜಾನುವಾರುಗಳ ಕೊನೆಯ ಆಶ್ರಯವಾಗಿದ್ದು, ಜಾನುವಾರು ಸಂಶೋಧನಾ ಕೇಂದ್ರವು ಅವುಗಳನ್ನು ಸಂರಕ್ಷಿಸುತ್ತಿದೆ.