ಉಡುಪಿ: ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರುತನಿಖೆ ನಡೆಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವ ಸೇನೆ ನೇತೃತ್ವದಲ್ಲಿ ಸರ್ವಿಸ್ ಬಸ್ ನಿಲ್ದಾಣ ಸಮೀಪದ ಬೋರ್ಡ್ ಹೈಸ್ಕೂಲ್ ಬಳಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮೈಸೂರಿನ ಒಡನಾಡಿ ಸಂಸ್ಥೆಯ ಹೈಕೋರ್ಟ್ ವಕೀಲರಾದ ಶ್ರೀನಿವಾಸ್, ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿ ಸಂತೋಷ್ ರಾವ್ ನಿರಾಪರಾಧಿ ಎಂಬುದು ಸಾಬೀತಾಗಿದೆ. ಹಾಗಾಗಿ ನೈಜ ಆರೋಪಿಯನ್ನು ಪತ್ತೆ ಹಚ್ಚಲು ನಿಟ್ಟಿನಲ್ಲಿ ಈ ಪ್ರಕರಣದ ಮರುತನಿಖೆ ಆಗಬೇಕು. ದಕ್ಷ ತನಿಖಾಧಿಕಾರಿಯನ್ನು ನಿಯೋಜಿಸಬೇಕು ಎಂದು ಒತ್ತಾಯಿಸಿದರು.
ಹೋರಾಟಗಾರ ಜಯನ್ ಮಲ್ಪೆ, ಬೆಳ್ತಂಗಡಿಯ ಶೇಖರ್ ಲಾಯಿಲ, ಚಿಂತಕ ಪ್ರೊ.ಫಣಿರಾಜ್, ಶ್ರೀರಾಮ ದಿವಾಣ, ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್ ಮತ್ತು ತಾಲೂಕು ಸಂಚಾಲಕ ದಯಾನಂದ ಕಪ್ಪೆಟ್ಟು, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ, ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಗಣೇಶ್ ನೆರ್ಗಿ, ರಮೇಶ್ ಪಾಲ್, ಕಿಟ್ಟ ಶ್ರೀಯಾನ್, ಬಿ.ಎನ್.ಸಂತೋಷ್, ಭಗವನ್ ದಾಸ್, ದಿನೇಶ್ ಜವನರಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.