main logo

ಸಾವಯವ ಮಾದರಿಯಲ್ಲಿ ಕಜೆ ಅಕ್ಕಿ ಬೆಳೆದು ‘ಜಯ..ಜಯ..’ ಎಂದ ಸಚೀಂದ್ರನಾಥ್ ರೈ

ಸಾವಯವ ಮಾದರಿಯಲ್ಲಿ ಕಜೆ ಅಕ್ಕಿ ಬೆಳೆದು ‘ಜಯ..ಜಯ..’ ಎಂದ ಸಚೀಂದ್ರನಾಥ್ ರೈ

ಮಂಗಳೂರು: ಕರಾವಳಿಯಲ್ಲಿ ಭತ್ತ ಕೃಷಿ ನೇಪಥ್ಯಕ್ಕೆ ಸರಿಯುತ್ತಿದೆ ಎಂಬ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಅಕಾಲಿಕ ಮಳೆ, ಕೂಲಿಯಾಳುಗಳ ಕೊರತೆಯಿಂದ ಜನ ಭತ್ತ ಕೃಷಿಯಿಂದ ವಿಮುಖ ರಾಗುತ್ತಿದ್ದಾರೆ. ಆದರೆ ಬಂಟ್ವಾಳ ತಾಲೂಕು ಬಡಗಬೆಳ್ಳೂರು ಗ್ರಾಮದ ಹೊಸಮನೆಯ ಸಚೀಂದ್ರ ನಾಥ್‌ ರೈ ಅವರು ಪಕ್ಕಾ ಸಾವಯವ ಮಾದರಿಯಲ್ಲಿ ಕಜೆ ಜಯ ಭತ್ತ ಬೆಳೆದಿದ್ದು, ಅದೀಗ  ಪೊಳಲಿ ಬ್ರ್ಯಾಂಡ್‌ ಅಕ್ಕಿ ಹೆಸರಿನಲ್ಲಿ ಪ್ರಸಿದ್ಧಿ ಪಡೆದಿದೆ.

ಗಂಜಿಗೆ ಅತಿ ಹೆಚ್ಚಿಗೆ ರುಚಿ ಕೊಡುವ ಪೊಳಲಿ ಬ್ರ್ಯಾಂಡ್‌ ಅಕ್ಕಿ: ಬಡಗಬೆಳ್ಳೂರು ಗ್ರಾಮದ ಸಚೀಂದ್ರ ನಾಥ್‌ ಸಾವಯವ ಮಾದರಿಯಲ್ಲಿ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಹೆಚ್ಚಿನ ಕೃಷಿಕರು ಭತ್ತ ಕೃಷಿ ಕಿರಿಕಿರಿ ಕೆಲಸ ಎಂದು ಗದ್ದೆಗಳನ್ನು ಹಾಳು ಬಿಟ್ಟಿದ್ದಾರೆ. ಆದರೆ ಸಚೀಂದ್ರ ನಾಥ್‌ ಹೀಗಲ್ಲ. ಈಗಲೂ ಕೂಡ ಮೂರು ಬೆಳೆ ಭತ್ತ ತೆಗೆಯುತ್ತಾರೆ.  ಆ ಮೂಲಕ ಭತ್ತ ಕೃಷಿ ಬೇಡ ಎಂದು ಮೂಗು ಮುರಿಯುವವರ ಮಧ್ಯೆ ಸಾಧಕರಾಗಿ ನಮ್ಮ ಮುಂದಿದ್ದಾರೆ. ದುಬಾರಿ ರಾಸಾಯನಿಕ ಬಳಸದೆ ಸಹಜ ಸಾವಯವ ಮಾದರಿಯಲ್ಲಿಯೇ ಭತ್ತ ಕೃಷಿ ಮಾಡುವ ಕಾರಣ ಕೀಟಬಾಧೆಯೂ ಕಡಿಮೆ ಎಂಬುದು ಸಚೀಂದ್ರ ರೈ ಅವರ ಅನುಭವದ ಮಾತು.

ರೈ ಅವರು ಇದೀಗ ಮೂರನೇ ಬೆಳೆ ಮಾಡುತ್ತಿದ್ದು, ಕಜೆ ಜಯ ಭತ್ತ ನಾಟಿ ಮಾಡಿದ್ದಾರೆ. ಕಜೆ ಜಯ ಮೂಲತಃ ಕೇರಳದ ತಳಿ.  ತಳಿಯನ್ನು ಗಂಜಿ ಮಾಡಲು ಹೆಚ್ಚಾಗಿ ಬಳಸುತ್ತಾರೆ. ಗಂಜಿ ಊಟಕ್ಕೆ ಈ ಭತ್ತದ ತಳಿ ಹೆಚ್ಚಿನ ಟೇಸ್ಟ್‌ ಒದಗಿಸುತ್ತದೆ. ಗಂಜಿಯೊಂದಿಗೆ ತುಪ್ಪ, ಉಪ್ಪಿನಕಾಯಿ ಬೆರೆಸಿ ಊಟ ಮಾಡಿದರೇ ಸ್ವರ್ಗ ಸುಖ ಎಂಬುದು ಹಲವರಿಂದ ಕೇಳಿಬಂದ ಮಾತು. ಅದಕ್ಕಾಗಿ ದೂರದೂರಿನಿಂದ ಹಲವರು ಬಂದು ಭತ್ತ ಕೊಂಡು ಹೋಗುತ್ತಾರೆ. ಅದೇ ರೀತಿ ಪುತ್ತೂರಿನ ವ್ಯಕ್ತಿಯೊಬ್ಬರು ಇವರಿಂದ  ಅಕ್ಕಿ ಕೊಂಡುಹೋಗಿ  ಪೊಳಲಿ ಬ್ರ್ಯಾಂಡ್‌ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಈ ಅಕ್ಕಿಗೆ ಅಗಾಧ ಬೇಡಿಕೆಯಿದೆ.

ಸಾವಯವ ಹುಲ್ಲಿಗೆ ಬೇಡಿಕೆ: ಸಚೀಂದ್ರ ನಾಥ್‌ ರೈ ಅವರು ಸಾವಯವ ಮಾದರಿಯಲ್ಲಿ ಭತ್ತ ಕೃಷಿ ಮಾಡುವ ಕಾರಣ ಇವರ ಭತ್ತದ ಹುಲ್ಲಿಗೆ ಬೇಡಿಕೆ ಸಾಕಷ್ಟಿದೆ. ಇದೀಗ ರೈ ಅವರ ಅಂಗಳದಲ್ಲಿ ಭತ್ತ ಒಕ್ಕಣೆ ಕಾರ್ಯ ನಡೆಯುತ್ತಿದ್ದು, ಅಲ್ಲಿಂದಲೇ ಹುಲ್ಲು ಖರೀದಿಗೆ ಅವಕಾಶವಿದೆ.

ಸಮಗ್ರ ಕೃಷಿ: ಸಚೀಂದ್ರ ರೈ ಅವರು ಬಸಳೆ, ಅಲಸಂಡೆ, ಬೆಂಡೆ, ಅಡಕೆ, ಕಾಳುಮೆಣಸು, ತೆಂಗು, ಸೇರಿದಂತೆ ವಿವಿಧ ಕೃಷಿ ಕೈಗೊಂಡಿದ್ದಾರೆ. ಇದ್ಯಾವುದಕ್ಕೂ ವಿಷಕಾರಿ ರಾಸಾಯನಿಕ ಪದಾರ್ಥಗಳನ್ನು ಹಾಕಿ ಭೂಮಿಯನ್ನು ಕಲುಷಿತ ಮಾಡುವುದಿಲ್ಲ. ಬದಲಿಗೆ ಸಾವಯವ ಮಾದರಿಯಲ್ಲಿಯೇ ಕೃಷಿ ಕೈಗೊಂಡಿರುವ ಕಾರಣ ಇವರ ಉತ್ಪನ್ನಗಳಿಗೆ ಬೇಡಿಕೆಯೂ ಹೆಚ್ಚಿದೆ.

ಅಗರ್‌ ವುಡ್‌: ಶಿವಮೊಗ್ಗ ಸೇರಿದಂತೆ ಮಲೆನಾಡು ಭಾಗದಲ್ಲಿ ವ್ಯಾಪಕವಾಗಿರುವ ಅಗರ್‌ ವುಡ್‌ ಗಿಡಗಳನ್ನು ಬೆಳೆಸಿದ್ದಾರೆ. ಅಗರ್‌ವುಡ್ ಹೆಚ್ಚು ಬೇಡಿಕೆಯಿರುವ ಮರವಾಗಿದೆ. ಶತಮಾನಗಳಿಂದ ಈ ಮರಗಳನ್ನು ಧೂಪದ್ರವ್ಯ, ಸುಗಂಧ ದ್ರವ್ಯಗಳು ಮತ್ತು ಔಷಧೀಯ ಪರಿಹಾರಗಳ ಉತ್ಪಾದನೆಯಲ್ಲಿ ಬಳಸಲಾಗುತ್ತಿದೆ. ಹಾಗಾಗಿ ಈ ಮರಗಳಿಗೆ ಪ್ರಪಂಚದಾದ್ಯಂತ ಹೆಚ್ಚಿನ ಬೇಡಿಕೆ ಇದೆ.

ಸಾಹಿವಾಲ್‌ ತಳಿಯ ದನವೂ ಇದೆ: ಇವರ ಕೊಟ್ಟಿಗೆಯಲ್ಲಿ ಹತ್ತಾರು ದನಗಳಿವೆ. ಹೈನುಗಾರಿಕೆಯಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ಪಾಕಿಸ್ತಾನ ಮೂಲದ ಸಾಹಿವಾಲ್‌ ಸೇರಿದಂತೆ ದೇಸಿ ಮತ್ತು ಮಿಶ್ರ ತಳಿಯ ಹಸುಗಳನ್ನು ಸಾಕುತ್ತಿದ್ದಾರೆ.

ದೇಶಕ್ಕೆ ಅನ್ನ ನೀಡುವ ಅನ್ನದಾತರ ರಕ್ಷಣೆ ಜನಪ್ರತಿನಿಧಿಗಳು, ಸರ್ಕಾರ, ಮತ್ತು ಅಧಿಕಾರಿಗಳ ಹೊಣೆ, ಈ ನಿಟ್ಟಿನಲ್ಲಿ ಕರಾವಳಿಯಲ್ಲಿ ನೇಪಥ್ಯಕ್ಕೆ ಸರಿಯುತ್ತಿರುವ ಭತ್ತ ಕೃಷಿಯಲ್ಲಿ ಹೊಸ ಭರವಸೆ ಮೂಡಿಸಿರುವ ಸಚೀಂದ್ರ ನಾಥ್‌ ರೈ ಅವರಂತಹ ಸಾಧಕ ರೈತೆರಿಗೆ ಸರ್ಕಾರದ ಬೆಂಬಲ ಅಗತ್ಯ. 

ಮನೋಹರ್‌ ಶೆಟ್ಟಿ ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಕಾರ್ಯದರ್ಶಿ (ಕೋಡಿಹಳ್ಳಿ ಚಂದ್ರ ಶೇಖರ್‌ ಬಣ)

 

Related Articles

Leave a Reply

Your email address will not be published. Required fields are marked *

error: Content is protected !!