Site icon newsroomkannada.com

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂಗಳ ಸಂಪತ್ತು ಮುಸ್ಲಿಮರಿಗೆ ಎಂದ ಪ್ರಧಾನಿ ; ದ್ವೇಷ ಭಾಷಣಕ್ಕೆ ಪ್ರತಿಪಕ್ಷಗಳ ನಾಯಕರಿಂದ ವಾಗ್ಧಾಳಿ, ವ್ಯಾಪಕ ಆಕ್ರೋಶದ ನಂತರ ಯೂಟರ್ನ್ ಹೊಡೆದ ಮೋದಿ

ಜೈಪುರ: ಕೇಂದದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಸಂಪತ್ತನ್ನು ಮುಸ್ಲಿಂ ಸಮುದಾಯಕ್ಕೆ ಹಂಚಿಕೆ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.

ರಾಜಸ್ಥಾನದ ಬನ್ನವಾರಾದಲ್ಲಿ ಚುನಾವಣಾ ರಾಲಿ ಉದ್ದೇಶಿಸಿ ಮಾತನಾಡಿದ ಅವರು, “ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯು ಸಂಪತ್ತಿನ ಮರು ಹಂಚಿಕೆಯ ಪ್ರಸ್ತಾಪ ಮಾಡಿದೆ. ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಸಹ ಕೆಲವು ವರ್ಷಗಳ ಹಿಂದೆ ದೇಶದ ಸಂಪತ್ತಿನ ಮೇಲೆ ಮುಸ್ಲಿಮರಿಗೆ ಮೊದಲ ಅಧಿಕಾರ ಎಂದಿದ್ದರು. ಇದರ ಅರ್ಥವೇನು,” ಎಂದು ಪ್ರಶ್ನಿಸಿದರು.

“ಅರ್ಥ ಬಹಳ ಸರಳ. ಆಸ್ತಿ ಮರುಹಂಚಿಕೆ ಎಂದರೆ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಆಸ್ತಿಯ ಮರುಹಂಚಿಕೆ ಎಂದರ್ಥ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಸಂಪತ್ತನ್ನು ಹೆಚ್ಚು ಮಕ್ಕಳನ್ನು ಹೊಂದಿರುವ ನುಸುಳುಕೋರರಿಗೆ ಹಂಚಿಕೆ ಮಾಡುವುದು ನಿಶ್ಚಿತ. ನೀವು ಇದನ್ನು ಒಪ್ಪಿಕೊಳ್ಳುತ್ತೀರಾ? ನಿಮ್ಮ ಶ್ರಮದ ಹಣವು ಅವರಿಗೆ ಹೋಗಬೇಕೆ,” ಎಂದು ಪ್ರಶ್ನಿಸಿದರು.

“ನಗರ ನಕ್ಸಲ್ ಮನಸ್ಥಿತಿಯನ್ನು ಹೊಂದಿರುವವರು ನಮ್ಮ ತಾಯಿ ಹಾಗೂ ಸಹೋದರಿಯರ ಮಂಗಲಸೂತ್ರವನ್ನೂ ಬಿಡುವುದಿಲ್ಲ. ಆ ಮಟ್ಟಕ ಇಳಿಯಲೂ ಅವರು ಹೇಸಿಗೆ ಪಡುವುದಿಲ್ಲ. ಬಡವರ ಅಭಿವೃದ್ಧಿ ಬಿಜೆಪಿಯ ಗುರಿಯಾಗಿದೆ. ಆದರೆ ಕಾಂಗ್ರೆಸ್ ನವರು ಭಯ, ಹಸಿವು ಮತ್ತು ಭ್ರಷ್ಟಾಚಾರವನ್ನು ಅಂಗಡಿಗಳಲ್ಲಿ ಮಾರಾಟ ಮಾಡುತ್ತಾರೆ.” ಎಂದು ಆರೋಪಿಸಿದರು.

ಮೋದಿ ಯೂಟರ್ನ್ ; 

ಪ್ರಧಾನಿ ಮೋದಿ ಭಾಷಣ ವಿವಾದವಾಗುತ್ತಿದ್ದಂತೆಯೇ ಇಂದು ಯೂ ಟರ್ನ್‌ ಹೊಡೆದಿದ್ದು, ತಮ್ಮ ಇಂದಿನ ಭಾಷಣದಲ್ಲಿ ತ್ರಿವಳಿ ತಲಾಖ್, ಹಜ್ ಕೋಟಾಗಳನ್ನು ಪ್ರಸ್ತಾಪಿಸುತ್ತಾ ‘ಡ್ಯಾಮೇಜ್ ಕಂಟ್ರೋಲ್‌’ಗೆ ಮುಂದಾಗಿದ್ದಾರೆ.

ಮುಸ್ಲಿಮರ ವಿರುದ್ಧದ ದ್ವೇಷ ಭಾಷಣ ಭಾರೀ ಟೀಕೆಗೆ ಗುರಿಯಾಗಿತ್ತು. ಉತ್ತರ ಪ್ರದೇಶದ ಅಲೀಘಡ್‌ನಲ್ಲಿ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಹಿಂದೆ, ಕಡಿಮೆ ಹಜ್ ಕೋಟಾದ ಕಾರಣ, ಸಾಕಷ್ಟು ಹೊಡೆದಾಟಗಳು ನಡೆಯುತ್ತಿದ್ದವು. ಲಂಚವು ಅಲ್ಲಿ ಸಾಮಾನ್ಯವಾಗಿತ್ತು ಮತ್ತು ಪ್ರಭಾವಿ ವ್ಯಕ್ತಿಗಳಿಗೆ ಮಾತ್ರ ಹಜ್‌ಗೆ ಹೋಗಲು ಅವಕಾಶವಿತ್ತು. ಆದರೆ, ಇಂದು ಭಾರತದಲ್ಲಿನ ಹಜ್ ಕೋಟಾವನ್ನು ಹೆಚ್ಚಿಸುವಂತೆ ನಾನು ಸೌದಿ ಅರೇಬಿಯಾದ ಯುವರಾಜನಿಗೆ ಮನವಿ ಮಾಡಿದ್ದೆ. ಅಲ್ಲದೇ, ವೀಸಾ ನಿಯಮಗಳನ್ನು ಕೂಡ ನಮ್ಮ ಸರ್ಕಾರವು ಮುಸ್ಲಿಮರಿಗೆ ಸುಲಭಗೊಳಿಸಿದೆ” ಎಂದು ಹೇಳಿದ್ದಾರೆ.

“ಈ ಹಿಂದೆ ನಮ್ಮ ಮುಸ್ಲಿಂ ತಾಯಂದಿರು ಮತ್ತು ಸಹೋದರಿಯರು ಹಜ್‌ಗೆ ಏಕಾಂಗಿಯಾಗಿ ಹೋಗಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಮುಹ್ರಿಮ್(ಮೇಲುಸ್ತುವಾರಿ) ಇಲ್ಲದೆ ಹಜ್‌ಗೆ ಹೋಗಲು ಆಗುತ್ತಿರಲಿಲ್ಲ. ಈಗ ನಮ್ಮ ಸರ್ಕಾರವು ಮುಹ್ರಿಮ್ ಇಲ್ಲದೆಯೂ ಹಜ್‌ಗೆ ತೆರಳಲು ಅವಕಾಶ ಮಾಡಿಕೊಟ್ಟಿದೆ. ಆ ಮೂಲಕ ಹಲವು ಮುಸ್ಲಿಂ ತಾಯಂದಿರ ಹಜ್‌ಗೆ ತೆರಳುವ ಕನಸು ಈಡೇರಿದೆ” ಎಂದು ಮೋದಿ ತಮ್ಮ ಭಾಷಣದಲ್ಲಿ ನುಡಿದಿದ್ದಾರೆ.

Exit mobile version