Site icon newsroomkannada.com

ಬಯಲಿಗೆ ಬಂತು ‘ಪ್ರೆಗ್ನೆನ್ಸಿ ಜಾಬ್’ ವಂಚನೆ ಜಾಲ

bihar pragency scam

ಪಟನಾ: ಬಿಹಾರದಲ್ಲಿ ಭಯಾನಕ ದಂಧೆಯೊಂದು ಬಯಲಿಗೆ ಬಂದಿದೆ. ಮಕ್ಕಳನ್ನು ಪಡೆಯಲು ಕಷ್ಟ ಪಡುತ್ತಿರುವ ಮಹಿಳೆಯರನ್ನು ಗರ್ಭವತಿ ಮಾಡಿದರೆ 13 ಲಕ್ಷ ರೂ. ನೀಡುವುದಾಗಿ ಪುರುಷರನ್ನು ವಂಚಿಸುತ್ತಿದ್ದ ಸೈಬರ್‌ ಜಾಲವೊಂದನ್ನು ಬಿಹಾರ ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ಬಂಧಿಸಿದ್ದಾರೆ.

ನವಾಡ ಜಿಲ್ಲೆಯಲ್ಲಿ ‘ಆಲ್‌ ಇಂಡಿಯಾ ಪ್ರೆಗ್ನೆಂಟ್‌ ಜಾಬ್‌ ಏಜೆನ್ಸಿ’ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದ ವಂಚಕರು, ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಇವುಗಳ ಲಿಂಕ್‌ ಹಂಚುವ ಮೂಲಕ ಜನರನ್ನು ಸೆಳೆಯುತ್ತಿದ್ದರು. ಈ ಸೈಟ್‌ಗಳಿಗೆ ಭೇಟಿ ಕೊಟ್ಟವರ ವಾಟ್ಸಾಪ್ ನಂಬರ್‌ ಪಡೆದುಕೊಂಡು ಅವರಿಂದ ನೋಂದಣಿ ಶುಲ್ಕವಾಗಿ 799 ರೂ.ಗಳನ್ನು ಪಡೆದುಕೊಳ್ಳಲಾಗುತ್ತಿತ್ತು. ಬಳಿಕ ಅವರಿಗೆ ಮಹಿಳೆಯರ ಫೋಟೋಗಳನ್ನು ಕಳುಹಿಸಿ, ಭದ್ರತಾ ಠೇವಣಿಯಾಗಿ 5 ಸಾವಿರದಿಂದ 20 ಸಾವಿರ ರೂ.ಗಳನ್ನು ವಸೂಲಿ ಮಾಡಲಾಗುತ್ತಿತ್ತು. ಭದ್ರತಾ ಠೇವಣಿಯು, ಪುರುಷರು ಆಯ್ಕೆ ಮಾಡಲಾಗುವ ಮಹಿಳೆಯರ ಸೌಂದರ್ಯದ ಮೇಲೆ ನಿರ್ಣಯವಾಗುತ್ತಿತ್ತು ಎಂದು ಪಟನಾ ಡಿಎಸ್‌ಪಿ ಹೇಳಿದ್ದಾರೆ.

‘ನಾವು ತೋರಿಸುವ ಮಹಿಳೆಯನ್ನು ಗರ್ಭವತಿ ಮಾಡಿದರೆ 13 ಲಕ್ಷ ರೂ. ಬಹುಮಾನ ನೀಡುತ್ತೇವೆ. ಒಂದು ವೇಳೆ ಆಕೆ ಗರ್ಭಿಣಿ ಆಗದಿದ್ದರೂ ಕನಿಷ್ಠ 5 ಲಕ್ಷ ರೂ. ಗಳನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತೇವೆ’ ಎಂದು ಈ ಗ್ಯಾಂಗ್‌ ನೋಂದಣಿ ಮಾಡಿಕೊಂಡವರಿಗೆ ಭರವಸೆ ನೀಡುತ್ತಿತ್ತು. ಆದರೆ ಭದ್ರತಾ ಠೇವಣಿ ದೊರೆಯುತ್ತಿದ್ದಂತೆ ಗ್ಯಾಂಗ್‌ ಪರಾರಿಯಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.

ಈ ಸೈಬರ್‌ ವಂಚಕರ ಬೆನ್ನು ಹತ್ತಿದ ಪೊಲೀಸರು 8 ಮಂದಿಯನ್ನು ಬಂಧಿಸಿದ್ದು, 9 ಮೊಬೈಲ್‌ ಫೋನ್‌, 2 ಪ್ರಿಂಟರ್‌ ಮತ್ತು ಕೆಲವು ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ. ಕೃತ್ಯದ ಮಾಸ್ಟರ್‌ ಮೈಂಡ್‌ ಮುನ್ನ ಕುಮಾರ್‌ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Exit mobile version