Site icon newsroomkannada.com

ಚಂದ್ರನಂಗಳದಲ್ಲಿ ‘ಹೊಂಡ’ ತಪ್ಪಿಸಿ ಮುಂದೆ ಸಾಗಿದ ಪ್ರಗ್ಯಾನ್ ರೋವರ್!

ಬೆಂಗಳೂರು: ಚಂದಿರನ ದಕ್ಷಿಣ ಧ್ರುವ ಭಾಗದಲ್ಲಿ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಬಳಿಕ ಅದರೊಳಗಿಂದ ಹೊರಬಂದಿರುವ ಪ್ರಗ್ಯಾನ್ ರೋವರ್ ಇದೀಗ ಶಶಿಯಂಗಳದ ತಪಾಸಣಾ ಕಾರ್ಯವನ್ನು ನಡೆಸುತ್ತಿದೆ.

ಈ ನಡುವೆ ಪ್ರಗ್ಯಾನ್ ಸಾಗುವ ಚಂದಿರನಂಗಳದ ದಾರಿಯೇನೂ ಸ್ಮೂತ್ ಹೈವೇ ರೀತಿಯಲ್ಲಿಲ್ಲ, ಇಲ್ಲಿ ಅಡಿಗಡಿಗೂ ಆಳವಾದ ಹೊಂಡಗಳಿವೆ, ನಮ್ಮ ರಸ್ತೆಗಳಲ್ಲಿರುವಂತೆ!

ಹಾಗಾಗಿ ಪ್ರಗ್ಯಾನ್ ಸಾಗುವ ದಾರಿಯನ್ನು ಇಲ್ಲಿ ಕುಳಿತ ವಿಜ್ಞಾನಿಗಳ ತಂಡ ನಿಕಟವಾಗಿ ಪರಿಶೀಲಿಸಿ ಅದಕ್ಕೆ ಸೂಕ್ತ ನಿರ್ದೇಶನಗಳನ್ನು (ಕಮಾಂಡ್) ನೀಡುತ್ತಿರುತ್ತಾರೆ.

ಖುಷಿಯ ವಿಚಾರವೆಂದರೆ, ಭೂಮಿಯ ನಿಯಂತ್ರಣ ಕೇಂದ್ರದಿಂದ ಕಾಲಕಾಲಕ್ಕೆ ರವಾನಿಸುವ ಸಂಜ್ಞೆಗಳನ್ನು (ಕಮಾಂಡ್) ರೋವರ್ ಚಾಚೂ ತಪ್ಪದೇ ಪಾಲಿಸುತ್ತಿದೆ.

ಇದೇ ರೀತಿಯಾಗಿ ಭಾರೀ ಆಪತ್ತಿನಿಂದ ರೋವರ್ ಪಾರಾಗಿರುವ ವಿಚಾರವನ್ನು ಇಸ್ರೋ ತನ್ನ ಅಧಿಕೃತ ಎಕ್ಸ್ (ಮೊದಲು ಟ್ವಿಟ್ಟರ್) ಅಕೌಂಟಿನಲ್ಲಿ ಹಂಚಿಕೊಂಡಿದೆ.

‘ಆಗಸ್ಟ್ 27ರಂದು ರೋವರ್ ಗೆ 4 ಮೀಟರ್ ಸುತ್ತಳತೆಯ ಹೊಂಡವೊಂದು ಎದುರಾಯ್ತು, ಇದನ್ನು ರೋವರ್ ತಾನಿದ್ದ 3 ಮೀಟರ್ ದೂರದಿಂದಲೇ ಗುರುತಿಸಿತು. ಇದಕ್ಕೆ ತಕ್ಷಣವೇ ತನ್ನ ದಾರಿಯನ್ನು ಬದಲಿಸುವಂತೆ ನಿರ್ದೇಶನ ನೀಡಲಾಯಿತು, ಮತ್ತು ಇದನ್ನು ಪಾಲಿಸಿದ ರೋವರ್ ಹೊಸ ದಾರಿ ಮಾಡಿಕೊಂಡು ಮುಂದಕ್ಕೆ ಸಾಗುತ್ತಿದೆ…’ ಎಂದು ಇಸ್ರೋ ಟ್ವೀಟ್ ಮಾಡಿದೆ.

ಇಸ್ರೋ ಚಂದ್ರನ ನೆಲದಲ್ಲಿ ಕೈಗೊಳ್ಳಲು ಬಯಸಿದ್ದ ಎಲ್ಲಾ ವೈಜ್ಞಾನಿಕ ಪ್ರಯೋಗಗಳು ಇಲ್ಲಿಯವರೆಗೆ ಯಶಸ್ವಿಯಾಗಿ ನಡೆಯುತ್ತಿದೆ, ಯಾಕೆಂದರೆ ಎಲ್ಲಾ ಪ್ಲೆಲೋಡ್ ಗಳು ಸುಸ್ಥಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ಇದಕ್ಕೂ ಮೊದಲು, ಚಂದ್ರನ ಮೇಲ್ಮೈಯಲ್ಲಿ ಉಷ್ಣಾಂಶದಲ್ಲಾಗುತ್ತಿರುವ ಭಾರೀ ಬದಲಾವಣೆ ಕುರಿತಾಗಿ ಪ್ರಗ್ಯಾನ್ ಕಳುಹಿಸಿಕೊಟ್ಟ ಮಾಹಿತಿಗಳನ್ನು ಗ್ರಾಫ್ ರೂಪದಲ್ಲಿ ಇಸ್ರೋ ಬಿಡುಗಡೆಗೊಳಿಸಿತ್ತು. ‘ಚಂದ್ರನಂಗಳದ ಥರ್ಮೋಫಿಸಿಕಲ್ ಪ್ರಯೋಗ’ ಎಂಬ ಹೆಸರಿನಲ್ಲಿ ಚಂದ್ರನ ದಕ್ಷಿಣ ಧ್ರುವಭಾಗದಲ್ಲಿ ಉಂಟಾಗುವ ಉಷ್ಣತೆಯ ಏರಿಳಿತವನ್ನು 10 ಸೆಂ.ಮೀ ಆಳದವರೆಗೆ ಸಾಗಬಲ್ಲ ಸಲಕರಣೆಯೊಂದಿಗೆ ನಡೆಸಲಾಗುತ್ತದೆ  ಮತ್ತು ಇದರ ಫಲಿತಾಂಶಗಳನ್ನು ದಾಖಲಿಸಿಕೊಳ್ಳಲು 10 ಪ್ರತ್ಯೇಕ ಉಷ್ಣತಾ ಸೆನ್ಸಾರ್ ಗಳನ್ನು ಅಳವಡಿಸಲಾಗಿದೆ.


ಒಟ್ಟಿನಲ್ಲಿ ಚಂದ್ರನಂಗಳದಲ್ಲಿ ಇಳಿದು ಸುತ್ತಾಡುತ್ತಿರುವ ಪ್ರಗ್ಯಾನ್ ರೋವರ್ ಒಟ್ಟು ಹದಿನಾಲ್ಕು ದಿನಗಳ ಕಾಲ (ಚಂದ್ರನ ಮೇಲಿನ ಒಂದು ದಿನ) ಅಲ್ಲಿ ವಿವಿಧ ತಪಾಸಣೆಗಳನ್ನು ನಡೆಸಿ ಮಾಹಿತಿಗಳನ್ನು ನಿಯಂತ್ರಣ ಕೇಂದ್ರಕ್ಕೆ ರವಾನಿಸಲಿದೆ.

Exit mobile version