ಹಣಕ್ಕಾಗಿ ತಮ್ಮದೇ ವೀಡಿಯೋಗಳನ್ನ ಪೋರ್ನ್ ಸೈಟ್ನಲ್ಲಿ ಅಪ್ಲೋಡ್ ಮಾಡ್ತಿದ್ದ ಜೋಡಿ!
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹಣ ಗಳಿಸುವ ಸಲುವಾಗಿ ಎಂತಹ ಕೆಲಸಗಳನ್ನ ಮಾಡ್ತಾರೆ ಅನ್ನೋದು ಬೆಂಗಳೂರು (Bengaluru) ಮಹಾನಗರದಲ್ಲಿ ಆಗಾಗ್ಗೆ ಬೆಳಕಿಗೆ ಬರುತ್ತಿದೆ. ಅದೇ ರೀತಿ ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಲೈಂಗಿಕ ಚಟುವಟಿಕೆ ನಡೆಸಿ, ಚಿತ್ರೀಕರಿಸಿದ ವೀಡಿಯೋವನ್ನು ಪೋರ್ನ್ ವೆಬ್ಸೈಟ್ಗೆ ಅಪ್ಲೋಡ್ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಈ ಬಗ್ಗೆ ಗುತ್ತಿಗೆದಾರರೊಬ್ಬರು ಐಟಿ ಆಕ್ಟ್ (ಮಾಹಿತಿ ತಂತ್ರಜ್ಞಾನ ಕಾಯ್ದೆ) (IT Act) ಅಡಿಯಲ್ಲಿ ದೂರು ನೀಡಿದ್ದು, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ (Jnanabharathi Police Station) ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಹಣಗಳಿಸುವ ಉದ್ದೇಶದಿಂದ ಮಹಿಳೆ ಆಕೆಯ ಪ್ರಿಯಕರನೊಂದಿಗೆ ಸೇರಿ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿದ್ದಾಳೆ. ಈ ಸೀಕ್ರೇಟ್ ಕೆಲಸಕ್ಕಾಗಿಯೇ ಉಲ್ಲಾಳ ಉಪನಗರದ ಬಳಿ ಮನೆಯೊಂದನ್ನು ಬಾಡಿಗೆಗೆ ಪಡೆದುಕೊಂಡಿದ್ದಾರೆ. ಅಲ್ಲಿ ತಾವೇ ಲೈಂಗಿಕ ಚಟುವಟಿಕೆ ನಡೆಸಿ, ಅದನ್ನು ಚಿತ್ರೀಕರಿಸಿ ಪೋರ್ನ್ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದರ ವೀಡಿಯೋ ಚಿತ್ರೀಕರಣಕ್ಕೆ ಮತ್ತೊಂದು ಜೋಡಿ ಸಹಕಾರ ನೀಡಿದೆ. ಆದ್ದರಿಂದ ಅವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಗುತ್ತಿಗೆದಾರರು ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸುತ್ತಿದ್ದಂತೆ ಗುತ್ತಿಗೆದಾರನಿಗೆ ಖತರ್ನಾಕ್ ಜೋಡಿಗಳು ಧಮ್ಕಿ ಹಾಕಿದ್ದು, ಪೊಲೀಸರ ಬಳಿ ದೂರುದಾರರು ರಕ್ಷಣೆ ಕೋರಿದ್ದಾರೆ.
ಜೋಡಿ ಅಶ್ಲೀಲ ವೀಡಿಯೋ ಚಿತ್ರೀಕರಣ ಮಾಡಿ ಪೋರ್ನ್ ವೆಬ್ಸೈಟ್ನಲ್ಲಿ ಪ್ರಸಾರ ಮಾಡಿದ್ದಾರೆ. ಇದು ಐಟಿ ಆಕ್ಟ್ ಸೆಕ್ಷನ್ 67 ಮತ್ತು 67A ಅನ್ವಯ ಅಪರಾಧವಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ದೂರಿನೊಂದಿಗೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.