ನವದೆಹಲಿ: ಬಾಲಿವುಡ್ನ ವಿವಾದಿತ ನಟಿ ಪೂನಂ ಪಾಂಡೆ ಅವರು ನಿಧನರಾಗಿದ್ದಾರೆ ಎಂದು ಸುದ್ದಿ ಹಬ್ಬಿದೆ. ಈ ವಿಷಯವನ್ನು ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲೇ ಹಂಚಿಕೊಂಡಿರುವುದರಿಂದ ಅಭಿಮಾನಿಗಳಿಗೆ ಶಾಕ್ ಆಗಿದೆ. ಇಂದು (ಫೆಬ್ರವರಿ 2) ಕ್ಯಾನ್ಸರ್ನಿಂದ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಸುದ್ದಿಯನ್ನು ನಂಬಲು ಅವರ ಅಭಿಮಾನಿಗಳು ಸಿದ್ಧರಿಲ್ಲ. ಯಾಕೆಂದರೆ, ಕೇವಲ ಮೂರು ದಿನಗಳ ಹಿಂದೆ ಪೂನಂ ಪಾಂಡೆ ಅವರು ಖುಷಿಖುಷಿಯಿಂದ ಓಡಾಡಿಕೊಂಡಿದ್ದರು. ಆ ಸಂದರ್ಭದ ವಿಡಿಯೋವನ್ನು ಕೂಡ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದನ್ನು ನೋಡಿದ ಅಭಿಮಾನಿಗಳು ಈಗ ಸಾವಿನ ಸುದ್ದಿಯನ್ನು ಬಿಲ್ಕುಲ್ ನಂಬುತ್ತಿಲ್ಲ.
ಹಲವು ದಿನಗಳ ಕಾಲ ಕ್ಯಾನ್ಸರ್ನಿಂದ ಬಳಲಿದ್ದರೆ, ನಂತರ ಚಿಕಿತ್ಸೆ ಫಲಕಾರಿ ಆಗದೇ ನಿಧನರಾದರೆ ನಂಬಬಹುದು. ಆದರೆ ಮೂರು ದಿನಗಳ ಹಿಂದೆ ಚೆನ್ನಾಗಿ ಓಡಾಡಿಕೊಂಡು ಇದ್ದ ಪೂನಂ ಪಾಂಡೆ ಅವರು ಈಗ ಏಕಾಏಕಿ ನಿಧನರಾಗಿದ್ದಾರೆ ಎಂಬ ಸುದ್ದಿಯನ್ನು ಕೇಳಿ ಅಭಿಮಾನಿಗಳಿಗೆ ಗೊಂದಲ ಮೂಡಿದೆ. ಇದು ಪ್ರಚಾರದ ಗಿಮಿಕ್ ಇರಬಹುದೇ ಎಂದು ಕೂಡ ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು ಪ್ರಚಾರಕ್ಕಾಗಿ ಹಲವು ರೀತಿಯ ಗಿಮಿಕ್ ಮಾಡುತ್ತಾರೆ. ಸಿನಿಮಾ, ವೆಬ್ಸೀರಿಸ್ ಅಥವಾ ಬ್ರ್ಯಾಂಡ್ ಪ್ರಮೋಷನ್ ಸಲುವಾಗಿಯೂ ಹತ್ತಾರು ರೀತಿಯ ನಾಟಕ ಮಾಡಿದ ಉದಾಹರಣೆಗಳು ನಮ್ಮ ಮುಂದೆ ಇವೆ. ಆ ಕಾರಣದಿಂದಲೇ ಪೂನಂ ಪಾಂಡೆ ಅವರ ನಿಧನ ಸುದ್ದಿಯ ಖಚಿತತೆ ಬಗ್ಗೆ ಕೆಲವರಿಗೆ ಪ್ರಶ್ನೆ ಮೂಡಿದೆ. ‘ಸತ್ತಿರುವುದು ನಿಜವಾದ ಪೂನಂ ಪಾಂಡೆನಾ ಅಥವಾ ಪೂನಂ ಹೆಸರಿನ ಬೇರೆ ಯಾರಾದರೂ ಆಗಿರಬಹುದಾ’ ಎಂದು ನೆಟ್ಟಿಗರು ಕಮೆಂಟ್ ಮೂಲಕ ಪ್ರಶ್ನೆ ಮಾಡಿದ್ದಾರೆ. ನಿಧನದ ಸುದ್ದಿಯನ್ನು ತಿಳಿಸಲು ಪೂನಂ ಪಾಂಡೆ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿದ ಪೋಸ್ಟ್ನಲ್ಲಿ ಪೂರ್ತಿಯಾಗಿ ಪೂನಂ ಪಾಂಡೆ ಎಂಬ ಹೆಸರು ಪ್ರಸ್ತಾಪ ಆಗಿಲ್ಲ. ಕೇವಲ ಪೂನಂ ಎಂದು ಬರೆಯಲಾಗಿದೆ. ಆ ಕಾರಣದಿಂದಲೂ ಕೆಲವರಿಗೆ ಇದು ಗಿಮಿಕ್ ಇರಬಹುದು ಎಂಬ ಅನುಮಾನ ಬಂದಿದೆ. ಕಮೆಂಟ್ಗಳ ಮೂಲಕ ನೆಟ್ಟಿಗರು ಇದನ್ನು ಪ್ರಶ್ನಿಸಿದ್ದಾರೆ. ಒಂದು ವೇಳೆ ಪೂನಂ ಪಾಂಡೆ ಕೊನೆಯುಸಿರು ಎಳೆದಿರುವುದು ನಿಜವೇ ಹೌದಾಗಿದ್ದರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.