ಮುಂಬೈ: ಸದಾ ವಿವಾದಗಳ ಮೂಲಕವೇ ಸುದ್ದಿ ಆದವರು ನಟಿ ಪೂನಂ ಪಾಂಡೆ ಅವರು ಸತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಸ್ವತಃ ಪೂನಂ ಪಾಂಡೆ ಖಾತೆ ಮೂಲಕ ಸಾವಿನ ವಿಚಾರ ತಿಳಿಸಲಾಗಿತ್ತು. ಆದರೆ, ಪೂನಂ ಪಾಂಡೆ ಬದುಕಿದ್ದಾರೆ. ತಾವು ಸುಳ್ಳು ಹೇಳಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ. ಗರ್ಭಕಂಠ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಈ ರೀತಿ ಮಾಡಿದೆ ಎಂದು ಅವರು ಹೇಳಿದ್ದಾರೆ. ಅವರಿಗೆ ಬಾಯಿಗೆ ಬಂದಂತೆ ಎಲ್ಲರೂ ಬೈಯ್ಯುತ್ತಿದ್ದಾರೆ.
ಪೂನಂ ಪಾಂಡೆ ಮೃತಪಟ್ಟಿದ್ದಾರೆ’ ಎಂದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಯಿತು. ಅವರ ಮ್ಯಾನೇಜರ್ ಪಾರುಲ್ ಚಾವ್ಲಾ ಕೂಡ ಈ ವಿಚಾರ ಖಚಿತಪಡಿಸಿದ್ದರು. ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಅವರ ಸಾವಿಗೆ ಸಂತಾಪ ಸೂಚಿಸಿದರು. ಆದರೆ, ಇಂದು (ಫೆಬ್ರವರಿ 3) ಹೊಸ ವಿಡಿಯೋ ಹಂಚಿಕೊಂಡಿದ್ದಾರೆ ಪೂನಂ. ತಾವು ಬದುಕಿರುವುದಾಗಿ ಅವರು ಹೇಳಿದ್ದಾರೆ.
ತಮ್ಮ ಸಾವಿನ ಬಗ್ಗೆ ತಾವೇ ಸುಳ್ಳು ಸುದ್ದಿ ಹಬ್ಬಿಸಿಕೊಳ್ಳಲು ಒಂದು ಕಾರಣವೂ ಇದೆಯಂತೆ. ಅದುವೇ ಗರ್ಭಕಂಠ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದು! ‘ನಾನು ಬದುಕಿದ್ದೇನೆ. ಗರ್ಭಕಂಠ ಕ್ಯಾನ್ಸರ್ನಿಂದ ನಾನು ಸತ್ತಿಲ್ಲ. ಆದರೆ, ಈ ರೋಗವನ್ನು ಹೇಗೆ ಎದುರಿಸಬೇಕು ಎನ್ನುವ ಜ್ಞಾನ ಇಲ್ಲದೆ ಸಾವಿರಾರು ಮಹಿಳೆಯರು ಸಾಯುತ್ತಿದ್ದಾರೆ. ಇತರ ಕೆಲವು ಕ್ಯಾನ್ಸರ್‌ಗಳಿಗಿಂತ ಇದು ಭಿನ್ನವಾಗಿದೆ. ಗರ್ಭಕಂಠದ ಕ್ಯಾನ್ಸರ್ ಸಂಪೂರ್ಣವಾಗಿ ತಡೆಯಬಹುದು. HPV ಲಸಿಕೆ ಮತ್ತು ಆರಂಭಿಕ ಪತ್ತೆ ಪರೀಕ್ಷೆಗಳಿಂದ ಇದು ಸಾಧ್ಯ. ಈ ಕಾಯಿಲೆಯಿಂದ ತಮ್ಮ ಪ್ರಾಣ ಕಳೆದುಕೊಳ್ಳದಂತೆ ನೋಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ’ ಎಂದು ಅವರು ಹೇಳಿದ್ದಾರೆ. DeathToCervicalCancer ಎನ್ನುವ ಹ್ಯಾಶ್ ಟ್ಯಾಗ್ ಹಾಕಿದ್ದಾರೆ.
ಪೂನಂ ಪಾಂಡೆ ಉದ್ದೇಶ ಉತ್ತಮವಾಗಿದೆ. ಆದರೆ, ಅವರು ಅದಕ್ಕೆ ತುಳಿದ ಮಾರ್ಗ ಸರಿ ಇಲ್ಲ ಎಂದು ಅನೇಕರು ಹೇಳಿದ್ದಾರೆ. ಅವರ ಸಾವಿನ ವಿಚಾರ ಸಾಕಷ್ಟು ಸುದ್ದಿ ಆಗಿತ್ತು. ಅನೇಕರು ದುಃಖ ಹೊರಹಾಕಿದ್ದರು. ಸಾವಿನ ವಿಚಾರದಲ್ಲಿ ಈ ರೀತಿ ಮಾಡಬಾರದು ಎಂದು ಅನೇಕರು ನಟಿಗೆ ಬುದ್ಧಿವಾದ ಹೇಳಿದ್ದಾರೆ. ಅವರಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ‘ಬಿಟ್ಟಿ ಪ್ರಚಾರ ಪಡೆಯಲು ಅವರು ಈ ರೀತಿ ಮಾಡಿದ್ದಾರೆ’ ಎಂದು ಅನೇಕರು ಹೇಳಿದ್ದಾರೆ.