ನವದೆಹಲಿ: ಪಿಎಂ ಕಿಸಾನ್ ಯೋಜನೆಯ 15ನೇ ಕಂತಿನ ಹಣದ ಬಿಡುಗಡೆಯ ದಿನಾಂಕ ಬಹಿರಂಗವಾಗಿದೆ. ನವೆಂಬರ್ 15ರಂದು 15ನೇ ಕಂತಿನ ಹಣ ಬಿಡುಗಡೆ ಆಗಲಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಈ ವಿಚಾರವನ್ನು ತಮ್ಮ ಎಕ್ಸ್ ಪೋಸ್ಟ್ನಲ್ಲಿ ಪ್ರಕಟಿಸಿದ್ದಾರೆ. 8 ಕೋಟಿಗೂ ಹೆಚ್ಚು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಬುಧವಾರದಂದು 2,000 ರೂ ಹಣ ವರ್ಗಾವಣೆ ಆಗಲಿದೆ. ‘ನವೆಂಬರ್ 15ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ 15ನೇ ಕಂತಿನ ಹಣವನ್ನು ಅರ್ಹ ರೈತರ ಬ್ಯಾಂಕ್ ಖಾತೆಗೆ ಡಿಬಿಟಿ ಮಾಧ್ಯಮದ ಮೂಲಕ ಹಣ ವರ್ಗಾವಣೆ ಮಾಡುತ್ತಾರೆ,’ ಎಂದು ಸಚಿವ ತೋಮರ್ ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ. ನರೇಂದ್ರ ಮೋದಿ ಅವರು 13ನೇ ಕಂತಿನ ಹಣದ ಬಿಡುಗಡೆಯನ್ನು ಮಾರ್ಚ್ 27ರಂದು ಬೆಳಗಾವಿಯಲ್ಲಿ ಪ್ರಕಟಿಸಿದ್ದರು. ಜುಲೈ 27ರಂದು 14ನೇ ಕಂತಿನ ಹಣವನ್ನು ಪ್ರಧಾನಿಯವರು ರಾಜಸ್ಥಾನದ ಸೀಕರ್ನಲ್ಲಿ ಬಿಡುಗಡೆ ಮಾಡಿದ್ದರು. ಈಗ 15ನೇ ಕಂತಿನ ಹಣವನ್ನು ಜಾರ್ಖಂಡ್ನ ಖೂಂಟಿಯಲ್ಲಿ ಅವರು ಬಿಡುಗಡೆ ಮಾಡಲಿದ್ದಾರೆ.
