Site icon newsroomkannada.com

ಸರ್ಕಾರಿ ಬಸ್‌ನಲ್ಲಿ ಮಹಿಳೆ ಸೊಂಟಕ್ಕೆ ಕೈ ಹಾಕಿ ಪೀಡಿಸಿದ ವೃದ್ಧ ಅರೆಸ್ಟ್‌: ಜಾಮೀನಿನ ಮೇಲೆ ಬಿಡುಗಡೆ

ಪುತ್ತೂರು: ವಿವಾಹಿತ ಮಹಿಳೆಗೆ ಬಸ್‌ ನಲ್ಲಿ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಗುರುವಾರ ಕೆಮ್ಮಿಂಜೆ ಗ್ರಾಮದ ವೃದ್ಧನನ್ನು ಬಂಧಿಸಲಾಗಿದೆ. ಪುತ್ತೂರಿನ ಮಹಿಳಾ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿ ಕ್ಷಿಪ್ರ ಗತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಏನಿದು ಘಟನೆ?
ಬಂಟ್ವಾಳ ತಾಲ್ಲೂಕಿನ ಕರೋಪಾಡಿ ಗ್ರಾಮದ ಕನ್ಯಾನ ಕುಕ್ಕಾಜೆ ನಿವಾಸಿ ವಿವಾಹಿತ ಮಹಿಳೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಪುತ್ತೂರು ನಗರದ ಹೊರವಲಯದ ಕಬಕ ಗ್ರಾಮದ ಮುರ ಎಂಬಲ್ಲಿ ವೃದ್ಧ ವ್ಯಕ್ತಿಯೊಬ್ಬ ಮಹಿಳೆಯ ಸೊಂಟ ಹಿಡಿದಿದ್ದಾನೆ. ಅಶ್ಲೀಲವಾಗಿ ವರ್ತಿಸಿದ್ದಾನೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ. ಈ ವೇಳೆ ಸಂತ್ರಸ್ತ ಮಹಿಳೆ ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ನಿಮ್ಮ ಮನೆಯಲ್ಲಿ ಯಾರೂ ಹೆಣ್ಣು ಮಕ್ಕಳು ಇಲ್ವಾ? ಬನ್ನಿ ಸಾರ್ ಯಾಕೆ ಎಲ್ಲಿ ಹೋಗುತ್ತಿದ್ದೀರಿ ಎಂದಾಗ ವೃದ್ಧ ಬೊಳುವಾರು ಬಳಿ ಬಸ್‌ನಿಂದ ಇಳಿದು ಹೋಗಿದ್ದಾನೆ. ಈ ಕುರಿತಂತೆ ಸಂತ್ರಸ್ತ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸದ್ಯ ಆರೋಪಿಯು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆಂದು ತಿಳಿದು ಬಂದಿದೆ.

Exit mobile version