ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ (ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್) ಯೋಜನೆಯು ಜುಲೈ ತಿಂಗಳಿಂದಲೇ ಅನ್ವಯವಾಗಿದ್ದು, ಆಗಸ್ಟ್‌ನಲ್ಲಿ ಬಂದ ಕರೆಂಟ್ ಬಿಲ್ ಶೂನ್ಯ ಬಿಲ್ ಎಂದು ನೀಡಲಾಗಿದೆ. ತುಮಕೂರಿನಲ್ಲಿ ಇಂದಿನಿಂದ ಮನೆ ಮನೆಗೆ ಕರೆಂಟ್ ಬಿಲ್ ವಿತರಣೆ ಮಾಡಲಾಗುತ್ತಿದ್ದು, ಬೆಸ್ಕಾಂ ಇಲಾಖೆ ಅಧಿಕಾರಿಗಳಿಂದ ಝಿರೋ ಲೈಟ್ ಬಿಲ್ ವಿತರಣೆ ಮಾಡಲಾಗುತ್ತಿದೆ.
ಈ ಮೂಲಕ ಕಾಂಗ್ರೆಸ್ ಚುನಾವಣೆ ವೇಲೆ ನೀಡಿದ್ದ ಗ್ಯಾರಂಟಿಯನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಶೂನ್ಯ ಕರೆಂಟ್ ಬಿಲ್ ಪಡೆದ ಗ್ರಾಹಕರು ಫುಲ್ ಖುಷ್ ಆಗಿದ್ದಾರೆ. ಗೃಹಜ್ಯೋತಿ ಬಗ್ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದೇನು? ಗೃಹಜ್ಯೋತಿ ಯೋಜನೆಯ ಕುರಿತು ಮಾತನಾಡಿದ ಇಂಧನ ಸಚಿವ ಕೆ.ಜೆ, ಜಾರ್ಜ್ ಅವರು, ಇಂದು ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷೆಯ ಯೋಜನೆ ಜಾರಿಗೆ ಬರುತ್ತಿದೆ. ನಾವು ಚುನಾವಣೆಗೆ ಹೋಗುವ ಮೊದಲೆ ಗ್ಯಾರಂಟಿ ಕಾರ್ಡ್ ನಲ್ಲಿ ಈ ಯೋಜನೆ ಘೋಷಣೆ ಮಾಡಿದ್ದೆವು. ಅದರಂತೆ ಆ ಗ್ಯಾರಂಟಿ ಕಾರ್ಡ್ ಗೆ ನಮ್ಮ ಕೆಪಿಸಿಸಿ ಅಧ್ಯಕ್ಷರು ಹಾಗೂ ಸಿದ್ದರಾಮಯ್ಯ ಅವರು ಸಹಿ ಮಾಡಿದ್ದರು. ಅದರಂತೆ ನಾವು ಯೋಜನೆ ಜಾರಿಗೆ ತಂದಿದ್ದೇವೆ. ಕುಟೀರಾ ಜ್ಯೋತಿ, ಅಮೃತ್ ಜ್ಯೋತಿ, ಭಾಗ್ಯ ಜ್ಯೋತಿ ಯೋಜನೆಗಳನ್ನು ಈ ಯೋಜನೆಯೊಳಗೆ ತರಲಾಯಿತು ಎಂದು ಮಾಹಿತಿ ನೀಡಿದರು.