ಮುಂಬೈ: ಪ್ರಸಾದ ಸೇವಿಸಿ ಅಸ್ವಸ್ಥಗೊಂಡ 300 ಮಂದಿಯನ್ನು ರಸ್ತೆಯಲ್ಲೇ ಸಾಲಾಗಿ ಮಲಗಿಸಿ ಡ್ರಿಪ್ಸ್ ಹಾಕಿರುವ ಘಟನೆ ಮಹಾರಾಷ್ಟ್ರದಲ್ಲಿ (Maharastra) ನಡೆದಿದೆ. ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಲೋನಾರ್‌ನ ಸೋಮಥಾನ ಗ್ರಾಮದಲ್ಲಿ ಒಂದು ವಾರದಿಂದ ʼಹರಿಣಂ ಸಪ್ತಾಹʼ ಎಂಬ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿತ್ತು. ಅಂತೆಯೇ ಕಾರ್ಯಕ್ರಮದ ಕೊನೆಯ ದಿನವಾದ ಮಂಗಳವಾರ ರಾತ್ರಿ ಪ್ರಸಾದ ವಿತರಣೆ ಮಾಡಲಾಗಿತ್ತು. ಹೀಗೆ ಪ್ರಸಾದ ಸೇವಿಸಿದ ಬಳಿಕ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 300 ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡರು.
ಸೋಮಠಾಣಾ ಮತ್ತು ಖಾಪರಖೇಡ್ ಗ್ರಾಮಗಳ ಭಕ್ತರು ರಾತ್ರಿ 10 ಗಂಟೆಗೆ ದೇವಸ್ಥಾನಕ್ಕೆ ಆಗಮಿಸಿ ಪ್ರಸಾದ ಸ್ವೀಕರಿಸಿದರು. ಪ್ರಸಾದವನ್ನು ಸೇವಿಸಿದ ನಂತರ ಅವರು ಹೊಟ್ಟೆ ನೋವು, ವಾಕರಿಕೆ ಮತ್ತು ವಾಂತಿ ಆರಂಭವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ರಸ್ತೆಯಲ್ಲೇ ಚಿಕಿತ್ಸೆ ಯಾಕೆ..?: ಅಸ್ವಸ್ಥರಾದವರನ್ನು ಬೀಬಿ ಗ್ರಾಮದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಬೆಡ್‌ಗಳ ಕೊರತೆಯಿಂದಾಗಿ ಬಹುತೇಕ ರೋಗಿಗಳು ಆಸ್ಪತ್ರೆಯ ಹೊರಭಾಗದ ರಸ್ತೆಯಲ್ಲೇ ಚಿಕಿತ್ಸೆ ಪಡೆಯಬೇಕಾಯಿತು. ಮರಗಳಿಗೆ ಕೊಕ್ಕೆ ಹಾಕಿದ್ದ ಹಗ್ಗಗಳ ಮೇಲೆ ಡ್ರಿಪ್ಸ್ ಬಾಟ್ಲಿಗಳನ್ನು ಅಳವಡಿಸಲಾಗಿತ್ತು. ಸದ್ಯ ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ಸಂಬಂಧ ಸ್ಥಳೀಯರು ಪ್ರತಿಕ್ರಿಯಿಸಿ, ಸೋಮಠಾಣಾದಲ್ಲಿ ಧಾರ್ಮಿಕ ಕಾರ್ಯಕ್ರಮದ ಆರನೇ ದಿನವಾಗಿತ್ತು. 400 ರಿಂದ 500 ಮಂದಿಗೆ ಹನ್ನೊಂದನೇ ದಿನಂದು ಪ್ರಸಾದ ವಿತರಿಸಲಾಯಿತು. ಆ ಬಳಿಕ ಅನೇಕರು ಅಸ್ವಸ್ಥಗೊಂಡರು. ಸದ್ಯ ಅವರೆಲ್ಲ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.