main logo

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮಧ್ಯರಾತ್ರಿ ಏರ್‌ಪೋರ್ಟ್‌ನಲ್ಲೇ ಅರೆಸ್ಟ್!

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮಧ್ಯರಾತ್ರಿ ಏರ್‌ಪೋರ್ಟ್‌ನಲ್ಲೇ ಅರೆಸ್ಟ್!

.ಬೆಂಗಳೂರು: ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಪ್ರಕರಣ ನಡೆದ 35 ದಿನಗಳ ಬಳಿಕ ಬೆಂಗಳೂರಿನಲ್ಲಿ ಅರೆಸ್ಟ್ ಆಗಿದ್ದಾರೆ.

ಏಪ್ರಿಲ್ 26ರಂದು ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಏಪ್ರಿಲ್ 27ರಂದು ಜರ್ಮನಿಗೆ ಹಾರಿದ್ದ ಪ್ರಜ್ವಲ್ ಜರ್ಮನಿಯ ಮ್ಯೂನಿಕ್‌ನಿಂದ ಬಂದ ಲುಫ್ತಾನ್ಸಾ ಏರ್‌ಲೈನ್ಸ್‌ನ (lufthansa airlines) DLH 764 A-359 ವಿಮಾನದಲ್ಲಿ ಬೆಂಗಳೂರಿಗೆ ವಾಪಸ್ ಆದರು. ಶುಕ್ರವಾರ ಮಧ್ಯರಾತ್ರಿ 12:35ರ ವೇಳೆಗೆ ವೇಳೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಯಿತು. ವಿಮಾನ ಲ್ಯಾಂಡಿಂಗ್‌ ಆಗುತ್ತಿದ್ದಂತೆ ವಿಮಾನ ಸುತ್ತುವರಿದ ಸಿಐಎಸ್‌ಎಫ್‌ ಸಿಬ್ಬಂದಿ, ಪ್ರಜ್ವಲ್‌ ಅವರನ್ನ ಬಂಧಿಸಿ ಕರೆದೊಯ್ದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್‌ ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕ ಅವರನ್ನ ಎಸ್‌ಐಟಿಗೆ ಹಸ್ತಾಂತರಿಸಲಿದ್ದಾರೆ.

ಭಾರೀ ಭದ್ರತೆ:
ಪ್ರಜ್ವಲ್ ಆಗಮನದ ವೇಳೆ ಹೆಚ್ಚು ಜನ ಸೇರುವ ಸಾಧ್ಯತೆಯಿದ್ದ ಕಾರಣ ಸಂಚಾರಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಲು ಮುನ್ನೆಚ್ಚರಿಕಾ ಕ್ರಮವಾಗಿ ಸಂಚಾರ ಪೊಲೀಸರು ಅಲರ್ಟ್ ಆಗಿದ್ದರು. ಪ್ರಜ್ವಲ್ ಬಂಧನ ಮಾಡಿ ಕರೆದುಕೊಂಡು ಹೋಗುವ ವೇಳೆಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಏರ್‌ಪೋರ್ಟ್ ರಸ್ತೆಯಲ್ಲಿ ವಾಹನಗಳನ್ನು ನಿಲುಗಡೆ ಮಾಡದಂತೆ ಸೂಚಿಸಲಾಗಿತ್ತು, ಜನಸಂದಣಿ ಸೇರದಂತೆ ಎಚ್ಚರಿಕೆ ವಹಿಸಲಾಗಿತ್ತು. ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಟ್ರಾಫಿಕ್ ಪೊಲೀಸರು ಹಾಗೂ ಕಾನೂನು ಸುವ್ಯವಸ್ಥೆ ಪೊಲೀಸರು ಭೇಟಿ ನೀಡಿದ್ದು, ಪ್ರಜ್ವಲ್ ಕರೆದೊಯ್ಯುವ ಮಾರ್ಗವನ್ನು ಪರಿಶೀಲನೆ ನಡೆಸಿದ್ದರು.

ಮ್ಯೂನಿಕ್ ವಿಮಾನ ನಿಲ್ದಾಣದ ವಲಸೆ ವಿಭಾಗ ಬೆಂಗಳೂರು ವಿಮಾನ ನಿಲ್ದಾಣದ ವಲಸೆ ವಿಭಾಗಕ್ಕೆ ಮೊದಲೇ ಪ್ರಯಾಣಿಕರ ಪಟ್ಟಿ ಕಳುಹಿಸಿತ್ತು. ಈ ಪಟ್ಟಿಯಲ್ಲಿ ಪ್ರಜ್ವಲ್ ರೇವಣ್ಣ ಹೆಸರು ಇರುವುದನ್ನು ಎಸ್‌ಐಟಿ ಖಚಿತ ಪಡಿಸಿತ್ತು. ಲುಫ್ತನ್ಸಾ ವಿಮಾನದಲ್ಲಿ 3 ಲಕ್ಷ ರೂ. ಖರ್ಚು ಮಾಡಿ ಬಿಸಿನೆಸ್ ದರ್ಜೆಯ ಟಿಕೆಟ್ ಖರೀದಿಸಿ ಪ್ರಜ್ವಲ್ ಮ್ಯೂನಿಕ್‌ನಿಂದ ಹೊರಟಿದ್ದರು. ಒಟ್ಟು 23 ಬಿಸಿನೆಸ್ ದರ್ಜೆಯ ಟಿಕೆಟ್ ಪೈಕಿ 8 ಮಂದಿ ಮಾತ್ರ ಪ್ರಜ್ವಲ್ ಅವರಿದ್ದ ವಿಮಾನದಲ್ಲಿ ಪ್ರಯಾಣ ಮಾಡಿದ್ದರು. ಪ್ರಜ್ವಲ್ ರೇವಣ್ಣ ಒಬ್ಬಂಟಿಯಾಗಿ ವಿಂಡೋ ಸೀಟ್‌ನಲ್ಲಿ ಕುಳಿತಿದ್ದರು.

ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ವೀಡಿಯೋಗಳನ್ನೊಳಗೊಂಡ ಏಪ್ರಿಲ್‌ 23ರಂದು ಬೆಳಕಿಗೆ ಬಂದಿತ್ತು. ಈ ಬಗ್ಗೆ ದೂರುಗಳು ಕೇಳಿಬರುತ್ತಿದ್ದಂತೆ ಎಸ್‌ಐಟಿ ರಚನೆಗೆ ರಾಜ್ಯ ಸರ್ಕಾರ ಮುಂದಾಗಿತ್ತು. ಅಶ್ಲೀಲ ವೀಡಿಯೋ ಪ್ರಕರಣ ಹೊರಬರುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಅವರು ವಿದೇಶದಲ್ಲಿ ತಲೆಮರೆಸಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಪೆನ್‌ಡ್ರೈವ್ ಪ್ರಕರಣ ಸಂಬಧ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿತ್ತು. ಈ ಬೆಳವಣಿಗೆಯ ನಂತರ, ಮೇ 1 ರಂದು ಪ್ರಜ್ವಲ್ ವಿಚಾರಣೆಗೆ ಹಾಜರಾಗಲು 7 ದಿನಗಳ ಕಾಲಾವಕಾಶ ಕೇಳಿದ್ದರು. ಬಳಿಕ ಯಾರೊಟ್ಟಿಗೂ ಸಂಪರ್ಕದಲ್ಲಿಲ್ಲದೇ ನಾಪತ್ತೆಯಾಗಿದ್ದ ಪ್ರಜ್ವಲ್ ಇದೇ ಮೇ 27ರಂದು ಅಜ್ಞಾತ ಸ್ಥಳದಿಂದ ವೀಡಿಯೋವೊಂದನ್ನ ಬಿಡುಗಡೆ ಮಾಡಿದ್ದರು.

ವಿದೇಶಕ್ಕೆ ಹೋಗುವ ಬಗ್ಗೆ ಮೊದಲೇ ಪ್ಲಾನ್ ಆಗಿತ್ತು. ವಿದೇಶಕ್ಕೆ ಹೋಗುವಾಗ ನನ್ನ ಮೇಲೆ ಯಾವುದೇ ಆರೋಪ ಇರಲಿಲ್ಲ. ನಾನು ವಿದೇಶದಲ್ಲಿದ್ದಾಗ ಯೂಟ್ಯೂಬ್ ನ್ಯೂಸ್ ನೋಡಿ ನನ್ನ ಮೇಲೆ ಗಂಭೀರ ಆರೋಪ ಬಂದಿರುವುದು ಕಂಡುಬAದಿದೆ. ಇದಾದ ನಂತರ ನನ್ನ ಹೆಸರನ್ನು ರಾಜಕೀಯವಾಗಿ ಬಳಸಿಕೊಂಡಿದ್ದಾರೆ. ಎಸ್‌ಐಟಿ ನೋಟಿಸ್ ನೀಡಿದ ವಿಚಾರ ಗೊತ್ತಾಯಿತು. ನಾನು ರಾಜಕೀಯವಾಗಿ ಬೆಳೆಯಬಾರದು ಎಂಬ ಕಾರಣಕ್ಕೆ ನನ್ನ ಮೇಲೆ ಪಿತೂರಿ ಮಾಡಿದ್ದಾರೆ ಎಂದು ಆರೋಪಿಸಿದ್ದರು.

Related Articles

Leave a Reply

Your email address will not be published. Required fields are marked *

error: Content is protected !!