ನವದೆಹಲಿ: ಆಘಾತಕಾರಿ, ಅಸಹ್ಯಕರ ಘಟನೆಯೊಂದರಲ್ಲಿ ಮುಂಬೈ-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಮಲ, ಮೂತ್ರ ವಿಸರ್ಜಿಸಿದ ಪ್ರಯಾಣಿಕನನ್ನು ಪೊಲೀಸರು ಬಂಧಿಸಿದ್ದಾರೆ. ಜೂನ್ 24 ರಂದು ಮುಂಬೈನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾದ ವಿಮಾನದ AIC 866 ಫ್ಲೈಟ್‌ನ ಸೀಟ್ ನಂ. 17F ನಲ್ಲಿ ಕುಳಿತಿದ್ದ ಪ್ರಯಾಣಿಕ ರಾಮ್ ಸಿಂಗ್, ವಿಮಾನದೊಳಗೆ ಮಲ, ಮೂತ್ರ ವಿಸರ್ಜನೆ ಮಾಡಿದ್ದು, ಪ್ರಯಾಣಿಕರಲ್ಲಿ ಅಸಹ್ಯಕರ ವಾತಾವರಣ ಹುಟ್ಟುಹಾಕಿತು.
ಈ ದುರ್ವರ್ತನೆಯನ್ನು ವಿಮಾನದ ಕ್ಯಾಬಿನ್ ಸಿಬ್ಬಂದಿ ಗಮನಿಸಿ ಆತನಿಗೆ ಮೌಖಿಕ ಎಚ್ಚರಿಕೆ ನೀಡಿದ ಬಳಿಕ ಇತರ ಪ್ರಯಾಣಿಕರಿಂದ ಆತನನ್ನು ಪ್ರತ್ಯೇಕಿಸಲಾಯಿತು. ಅಲ್ಲದೆ “ಈ ಪರಿಸ್ಥಿತಿಯನ್ನು ಪೈಲಟ್ ಇನ್ ಕಮಾಂಡ್ ಕ್ಯಾಪ್ಟನ್ ವರುಣ್ ಸಂಸಾರೆ ಅವರಿಗೆ ತಕ್ಷಣವೇ ತಿಳಿಸಲಾಯಿತು. ಅಲ್ಲದೆ ಘಟನೆ ಕುರಿತು ಏರ್ ಇಂಡಿಯಾ ಸೆಕ್ಯುರಿಟಿ ಮುಖ್ಯಸ್ಥ ರಾಜೇಂದರ್ ಕುಮಾರ್ ಮೀನಾ ಅವರಿಗೆ ವಿವರಿಸಲಾಯಿತು. ವಿಮಾನ ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಯಿತು. ಫ್ಲೈಟ್ ಕ್ಯಾಪ್ಟನ್ ನೀಡಿದ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಐಜಿಐ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 294 ಮತ್ತು 510 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿ ಪ್ರಯಾಣಿಕನನ್ನು ಬಂಧಿಸಲಾಗಿದ್ದು, ನಂತರ ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಕೋರ್ಟ್ ಆತನಿಗೆ ಜಾಮೀನು ನೀಡಿದೆ. ಈ ವಿಷಯದಲ್ಲಿ ಹೆಚ್ಚಿನ ಮಾಹಿತಿ ಮತ್ತು ಪುರಾವೆಗಳನ್ನು ಸಂಗ್ರಹಿಸಲು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.