ಹೊಸದಿಲ್ಲಿ: ಟೊರೆಂಟೊದಿಂದ ನವದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದ ಶೌಚಾಲಯದಲ್ಲಿ ಸಿಗರೇಟ್ ಸೇದಿದ್ದಲ್ಲದೆ ಅದನ್ನು ತಡೆಯಲು ಬಂದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ನೇಪಾಳಿ ಪ್ರಜೆಯ ಮೇಳೆ ಎಫ್‌ಐಆರ್ ದಾಖಲಿಸಲಾಗಿದೆ.
ಘಟನೆ ವಿವರ ಹೀಗಿದೆ: ಟೊರೊಂಟೊದಿಂದ ಟೇಕಾಫ್ ಆದ ಏರ್ ಇಂಡಿಯಾ ವಿಮಾನದಲ್ಲಿದ್ದ ನೇಪಾಳ ನಿವಾಸಿ ಮಹೇಶ್ ಸಿಂಗ್ ಪಾಂಡಿ ಎಂಬ ಪ್ರಯಾಣಿಕ ತಮ್ಮ ಆಸನವನ್ನು 26 ಇ ನಿಂದ 26 ಎಫ್‌ಗೆ ಬದಲಾಯಿಸಿದ್ದರು. ಅಲ್ಲದೆ ಎಕಾನಮಿ ಕ್ಲಾಸ್ ಸಿಬ್ಬಂದಿಯನ್ನು ನಿಂದಿಸಲು ಆರಂಭಿಸಿದರು. ಪ್ರಯಾಣಿಕರಿಗೆ ಊಟ ನೀಡಿದ ಬಳಿಕ ವಿಮಾನದ ಶೌಚಾಲಯದಿಂದ ಹೊಗೆ ಎಚ್ಚರಿಕೆ ಗಂಟೆ ಮೊಳಗಿದ್ದು, ಈ ವೇಳೆ ಅಲ್ಲಿ ಮಹೇಶ್ ಸಿಂಗ್ ಸಿಗರೇಟ್ ಮತ್ತು ಲೈಟರ್ ಹಿಡಿದು ನಿಂತಿದ್ದರು. ಈ ವೇಳೆ ವಿಮಾನ ಸಿಬ್ಬಂದಿಯನ್ನು ಅವರು ಹಿಂದಕ್ಕೆ ತಳ್ಳಿದ್ದಾರೆ. ಅಲ್ಲದೆ ಶೌಚಾಲಯದ ಬಾಗಿಲನ್ನು ಮುರಿದು ಹಾಕಿದ್ದಾರೆ.
ತಕ್ಷಣವೇ ಸಿಬ್ಬಂದಿ ವಿಮಾನ ಕ್ಯಾಪ್ಟನ್‌ಗೆ ಮಾಹಿತಿ ನೀಡಿದ್ದು, ಕ್ಯಾಪ್ಟನ್‌ನ ಸೂಚನೆಯಂತೆ, ಕ್ಯಾಬಿನ್ ಸಿಬ್ಬಂದಿ ಪುನಿತ್ ಶರ್ಮಾ ಅವರ ಸಹಾಯದಿಂದ ಮಹೇಶ್ ಸಿಂಗ್ ಅವರನ್ನು ಹಿಡಿಯಲು ಪ್ರಯತ್ನಿಸಿದ್ದರೂ ಸಾಧ್ಯವಾಗಿಲ್ಲ. ಬಳಿಕ ವಿಮಾನ ಪ್ರಯಾಣಿಕರ ಸಹಕಾರದಿಂದ ಅವರನ್ನು ಹಿಡಿದು ಮುಂದೆ ಅನಾಹುತ ನಡೆಸುವುದನ್ನು ತಡೆದಿದ್ದಾರೆ. ಘಟನೆ ಬಳಿಕ ವಿಮಾನ ಸಿಬ್ಬಂದಿ ಆತನ ವರ್ತನೆ ಕುರಿತು ನಿಕಟವಾಗಿ ಗಮನಹರಿಸಿದ್ದು, ಪ್ರಯಾಣಿಕನನ್ನು ಹಿಡಿತದಲ್ಲಿರಿಸಿಕೊಂಡಿದ್ದಾರೆ. ಬಳಿಕ ವಿಮಾನ ಸಿಬ್ಬಂದಿ ಐಜಿಎ ಪೊಲೀಸ್ ಠಾಣೆಯಲ್ಲಿ ಜುಲೈ 9 ರಂದು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 323, 506, 336 ಮತ್ತು ಏರ್‌ಕ್ರಾಫ್ಟ್ ನಿಯಮಗಳ ಸೆಕ್ಷನ್ 22, 23 ಮತ್ತು 25 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.