ಪನ್ನಾ: ಕೃಷ್ಣ ಜನ್ಮಾಷ್ಟಮಿಯ ದಿನದಂದೇ ಮಧ್ಯಪ್ರದೇಶದ ಪನ್ನಾ ಎಂಬಲ್ಲಿರುವ ಕೃಷ್ಣ ಮಂದಿರವೊಂದಲ್ಲಿ ರಾಜ ಕುಟುಂಬಕ್ಕೆ ಸೇರಿದ ಮಹಿಳೆಯ ಮೇಲೆ ದೇವಸ್ಥಾನದಲ್ಲಿದ್ದವರು ದೌರ್ಜನ್ಯವೆಸಗಿರುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸದ್ಯ ದೇಶಾದ್ಯಂತ ಚರ್ಚೆಯಲ್ಲಿರುವ ‘ಸನಾತನ ಧರ್ಮ’ ವಿಚಾರಕ್ಕೆ ಈ ಘಟನೆ ಇನ್ನಷ್ಟು ಕಿಡಿ ಹೊತ್ತಿಸಿದೆ.
ಪನ್ನಾ ರಾಜ ಮನೆತನಕ್ಕೆ ಸೇರಿರುವ ಮಹಾರಾಣಿ ಜಿತೇಶ್ವರಿ ದೇವಿ ಎಂಬವರೇ ಈ ರೀತಿಯಾಗಿ ದೇವರ ಮಂದಿರದ ಗರ್ಭಗುಡಿಯನ್ನು ಪ್ರವೇಶಿಸಿ ಪೂಜೆಗೆ ಯತ್ನಿಸಿ, ಭಕ್ತರು ಮತ್ತು ದೇವಸ್ಥಾನದ ಆಡಳಿತ ಮಂಡಳಿಯವರ ವಿರೋಧಕ್ಕೆ ಒಳಗಾದ ಮಹಿಳೆಯಾಗಿದ್ದಾರೆ.
ಇಲ್ಲಿನ, ಪನ್ನಾ ರಾಜಕುಟುಂಬಕ್ಕೆ ಸೇರಿದ ವಿಧವೆ ರಾಜಮಾತೆಯೊಬ್ಬರು, ಕೃಷ್ಣ ಮಂದಿರದಲ್ಲಿ ಪೂಜೆ ನಡೆಯುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಗರ್ಭಗುಡಿಯನ್ನು ಪ್ರವೇಶಿಸಿ ದೇವರಿಗೆ ಆರತಿ ಬೆಳಗಲು ಪ್ರಯತ್ನಿಸಿದ್ದಾರೆ.
ಈ ಅನಿರೀಕ್ಷಿತ ಘಟನೆಯಿಂದ ಶಾಕ್ ಗೊಳಗಾದ ಅಲ್ಲಿದ್ದವರು ತಕ್ಷಣವೇ ರಾಜಕುಟುಂಬಕ್ಕೆ ಸೇರಿದ್ದ ಆ ಮಹಿಳೆಯನ್ನು ಗರ್ಭಗುಡಿಯಿಂದ ಹೊರಗೆಳೆದು ಬಳಿಕ ಪೊಲೀಸರ ವಶಕ್ಕೆ ಒಪ್ಪಿಸುತ್ತಾರೆ. ಈ ವಿಡಿಯೋ ತುಣುಕೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಯಂಕರ ಸದ್ದು ಮಾಡುತ್ತಿದೆ.
The woman who belongs to the Royal family of Panna was not allowed to offer prayers on Temple premises because of her widowhood, according to Reports.
If it is not Sanatan Dharam, then what it is? pic.twitter.com/WtCAytHsoU
— Mannu (@mannu_meha) September 8, 2023
ಆದರೆ, ಮಂದಿರದ ಆಡಳಿತ ಮಂಡಳಿಯವರ ಪ್ರಕಾರ, ಈ ಮಹಿಳೆ ಮದ್ಯದ ಅಮಲಿನಲ್ಲಿ ಈ ಕೃತ್ಯವನ್ನು ಎಸಗಿದ್ದಾರೆ ಎಂಬ ಆರೋಪವಾಗಿದ್ದರೆ, ಸಂತ್ರಸ್ತ ಮಹಿಳೆ ಮಾತ್ರ, ‘ತಾನು ವಿಧವೆ ಎಂಬ ಕಾರಣಕ್ಕೆ ನನಗೆ ಗರ್ಭಗುಡಿ ಪ್ರವೇಶಿಸಲು ಅಲ್ಲಿದ್ದವರು ಅವಕಾಶ ನೀಡದೇ ಅನ್ಯಾಯ ಮಾಡಿದ್ದಾರೆ..’ ಎಂದು ಆರೋಪಿಸಿದ್ದಾರೆ.
ಆದರೆ, ಮಂದಿರದ ಆಡಳಿತ ಮಂಡಳಿ ಸದಸ್ಯರು ಹೇಳುವಂತೆ, ‘ಪನ್ನಾ ರಾಜಮನೆತನಕ್ಕೆ ಸೇರಿದ ಪುರುಷರಿಗೆ ಮಾತ್ರವೇ ಇಲ್ಲಿ ಪೂಜೆ ಸಲ್ಲಿಸಲು ಅವಕಾಶವಿದ್ದು, ಈ ಸಂಪ್ರದಾಯ ಕಳೆದ 300 ವರ್ಷಗಳಿಂದ ನಡೆದುಕೊಂಡು ಬರುತ್ತಿದೆ’ ಎಂಬ ವಾದವನ್ನು ಮಂಡಿಸಿದ್ದಾರೆ.
ಭಕ್ತರ ಧಾರ್ಮಿಕ ಭಾವನೆಗಳಿಗೆ ಕುಂದುಂಟು ಮಾಡಿದ ವಿಚಾರದಲ್ಲಿ ಸದ್ಯಕ್ಕೆ ಜಿತೇಶ್ವರಿ ದೇವಿ ಅವರನ್ನು ಪನ್ನಾ ಪೊಲೀಸರು ಬಂಧಿಸಿದ್ದಾರೆ.
‘ಮಹಾರಾಣಿ ಜಿತೇಶ್ವರಿ ದೇವಿ ಅವರಿಗೆ ಸಂಪ್ರದಾಯದಂತೆ ಪೂಜೆ ಕೈಗೊಳ್ಳಲು ಅವಕಾಶ ನೀಡಲಾಗಿತ್ತು, ಆದರೆ ಆಕೆ ಈ ಸಂದರ್ಭದಲ್ಲಿ ಇದ್ದಕ್ಕಿದ್ದತೆ ಮಂದಿರದ ಗರ್ಭಗುಡಿಯನ್ನು ಪ್ರವೇಶಿಸಿದ ಕಾರಣ ಪರಿಸ್ಥಿತಿ ಕೈಮೀರಿತು ಮತ್ತು ಅಲ್ಲಿ ಸೇರಿದ್ದ ಭಕ್ತಾದಿಗಳು ಆಕೆಯ ಈ ವರ್ತನೆಗೆ ವಿರೋಧ ತೋರಿದಾಗ ಆಕೆ ಗದ್ದಲವೆಬ್ಬಿಸಿದ್ದಾರೆ ಮತ್ತು ಅಲ್ಲಿಯೇ ಬಿದ್ದು ಹೊರಳಾಡಿದ್ದಾರೆ. ಬಳಿಕ ಅಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸರು ಆಕೆಯನ್ನು ಅಲ್ಲಿಂದ ಕರೆದೊಯ್ದಿದ್ದಾರೆ..’ ಎಂದು ಪನ್ನಾ ಪೊಲೀಸ್ ವರಿಷ್ಠಾಧಿಕಾರಿ ಸಾಯಿ ಕೃಷ್ಣ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.