ಪಡುಬಿದ್ರಿ : ಕರಾವಳಿಯಾದ್ಯಂತ ಮಳೆ ಬಿರುಸುಗೊಂಡಿದ್ದು ಕಡಲಾರ್ಭಟವು ಮುಂದುವರೆದಿದೆ. ಪಡುಬಿದ್ರಿ ಮುಖ್ಯ ಬೀಚ್ ಸೇರಿದಂತೆ ಕಾಡಿಪಟ್ಣ ಭಾಗದಲ್ಲಿ ಕಡಲ್ಕೊರೆತದ ಪ್ರಭಾವ ಹೆಚ್ಚಾಗಿದೆ. ಈಗಾಗಲೇ 6 ತೆಂಗಿನಮರಗಳು ಕಡಲ ಒಡಲು ಸೇರಿದೆ. ಮುಖ್ಯ ಬೀಚ್ ನ ಇಂಟರ್ಲಾಕ್, ಕೈರಂಪಣಿ ಗೋದಾಮು ಸಮುದ್ರ ಪಾಲಾಗುವ ಅಪಾಯದಲ್ಲಿದೆ.
ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಪಡುಬಿದ್ರಿ ಕಾಡಿಪಟ್ಣ ಮೊಗವೀರ ಸಭಾದ ಅಧ್ಯಕ್ಷರಾದ ಅಶೋಕ್ ಸಾಲ್ಯಾನ್, ಬ್ಲ್ಯೂ ಫ್ಲಾಗ್ ಮಾನ್ಯತೆ ದೊರಕಿದ ಬೀಚ್ ಸರ್ವನಾಶವಾಗುತ್ತಿದೆ. ಜಿಲ್ಲಾಡಳಿತ ಇದಕ್ಕೆ ತುರ್ತು ವ್ಯವಸ್ಥೆ ಕಲ್ಪಿಸಬೇಕಾಗಿದೆ. ಸುಶೀಲ್ ಕಾಂಚನ್ ರವರಿಗೆ ಸೇರಿದ ತೆಂಗಿನಮರಗಳು ಸಮುದ್ರ ಪಾಲಾಗಿದೆ.
ಕೈರಂಪಣಿ ಗೋದಾಮು, ಪ್ರವಾಸಿಗರು ಆಸೀನವಾಗಲಿಕ್ಕಿರುವ ಮಂಟಪ ಅಪಾಯದ ಭೀತಿಯಲ್ಲಿದೆ. ಇಲ್ಲಿ 2-3 ವರ್ಷದಿಂದ ಆಗುತ್ತಿರುವ ಸಮಸ್ಯೆ. ತೌಖ್ತೆ ಚಂಡಮಾರುತದ ಸಮಯದಲ್ಲಿಯೂ ಇಲ್ಲಿಗೆ ಭೇಟಿ ನೀಡಿದ ಕಂದಾಯ ಸಚಿವರಾದ ಅಶೋಕ್, ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಶಾಸಕರಿಗೂ ಮನವಿ ಮಾಡಿದರೂ ಸ್ಪಂದನೆಯಿಲ್ಲ. ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ ಎಂದರು.