Site icon newsroomkannada.com

ಜೆಪಿ ಹೆಗ್ಡೆ ವಿರುದ್ಧ ಜಾಲತಾಣದಲ್ಲಿ ಅಪಪ್ರಚಾರ: ನಾಲ್ವರ ಮೇಲೆ ಕೇಸು ದಾಖಲು

ಕುಂದಾಪುರ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ. ಜಯಪ್ರಕಾಶ್‌ ಹೆಗ್ಡೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಸೃಷ್ಟಿಸಿ, ಅಪಪ್ರಚಾರ ಮಾಡಿ, ತೇಜೋವಧೆ ಮಾಡಿರುವುದಾಗಿ ನಾಲ್ವರು ಆರೋಪಿಗಳು ಹಾಗೂ ಎರಡು ಜಾಲತಾಣಗಳ ವಿರುದ್ಧ ಕಾಂಗ್ರೆಸ್‌ ಮುಖಂಡ, ಕುಂದಾಪುರದ ಉದ್ಯಮಿ ಸುರೇಂದ್ರ ಶೆಟ್ಟಿ ದೂರು ನೀಡಿದ್ದಾರೆ.

ಆರೋಪಿಗಳಾದ ಸಂದೀಪ್‌ ಶೆಟ್ಟಿ ನಿಟ್ಟೆ, ಪ್ರಕಾಶ್‌ ಹಂದಟ್ಟು, ಉಡುಪಿಯ ಸಂಜಿತ್‌ ಕೋಟ್ಯಾನ್‌, ಗಾಂಸ್ಕರ್‌ಎನ್‌., ವಾಸ್ತವ ಹಾಗೂ ಕೇಸರಿ ಬ್ರಿಗೇಡ್‌ ಎನ್ನುವ ಸಾಮಾಜಿಕ ಜಾಲತಾಣದ ವಿರುದ್ಧ ಕೇಸು ದಾಖಲಾಗಿದೆ.

ದೂರಿನಲ್ಲೇನಿದೆ?

ಆರೋಪಿಗಳು ತಮ್ಮ ಫೇಸ್‌ಬುಕ್‌ ಖಾತೆಗಳಲ್ಲಿ “ಬ್ರಹ್ಮಾವರದಲ್ಲಿ 95ರಲ್ಲಿ ಕೊಲೆಯಾದ ರಾಜರಾಮ ಸೇರ್ವೆಗಾರ ಅವರು ಬಿಜೆಪಿ ಕಾರ್ಯಕರ್ತನಾಗಿದ್ದು, ಇವರನ್ನು ಮುಗಿಸಿದ ಪೊಲೀಸ್‌ ಅಧಿಕಾರಿ ಯಾರು? ತುಷ್ಟಿಕರಣ ರಾಜಕಾರಣಿ ಜೆಪಿ ಬೇಕಿಲ್ಲ, ಉಡುಪಿ – ಚಿಕ್ಕಮಗಳೂರು ಹಿಂದುತ್ವಕ್ಕೆ ಪುಷ್ಟಿ ನೀಡುವ ಬಿಜೆಪಿ ನಮ್ಮ ಆಯ್ಕೆ’ ಎನ್ನುವ ಸಂದೇಶವನ್ನು ಪ್ರಸಾರ ಮಾಡುತ್ತಿರುವುದಾಗಿದೆ. ಇದಲ್ಲದೆ ಕೊಲೆಯಾದ ರಾಜಾರಾಮ ಸೇರ್ವೇಗಾರರ ವೀಡಿಯೋವನ್ನು ಮುದ್ರಿಸಿ, ಅದರಲ್ಲಿ ಜಯಪ್ರಕಾಶ್‌ ಹೆಗ್ಡೆಯವರ ಫೋಟೋ ಬಳಸಿ, ತೇಜೋವಧೆ ಮಾಡಿ, ಕೋಮು ಸೌಹಾರ್ದತೆ ಕೆಡಿಸಿ, ಧರ್ಮಗಳ ನಡುವೆ ಸಂಘರ್ಷ ನಿರ್ಮಾಣ ಮಾಡುತ್ತಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version