Site icon newsroomkannada.com

ಆನ್‌ಲೈನ್‌ ಬೆಟ್ಟಿಂಗ್‌ ದಂಧೆಯಲ್ಲಿ ಸಿನಿಮಾ ತಾರೆಯರು: ಕಪಿಲ್, ಶ್ರದ್ಧಾ ಕಪೂರ್ ಗೆ ನೋಟಿಸ್

ಮುಂಬೈ: ಮಹದೇವ್ ಆನ್​ಲೈನ್ ಬೆಟ್ಟಿಂಗ್ ಆ್ಯಪ್ ಪ್ರಕರಣ ರಾಷ್ಟ್ರಮಟ್ಟದಲ್ಲಿ ಇದೀಗ ಸುದ್ದಿ ಮಾಡುತ್ತಿದೆ. ಹಲವು ಸೆಲೆಬ್ರೆಟಿಗಳ ಹೆಸರು ಪ್ರಕರಣದಲ್ಲಿ ಕೇಳಿಬರುತ್ತಿದೆ. ಮಹದೇವ್ ಆನ್​ಲೈನ್ ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ಬಾಲಿವುಡ್​ನ ಹಲವರಿಗೆ ಸಂಕಷ್ಟ ಎದುರಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ರಣಬೀರ್ ಕಪೂರ್ ಅವರಿಗೆ ಇತ್ತೀಚೆಗೆ ನೋಟಿಸ್ ಜಾರಿ ಮಾಡಲಾಗಿತ್ತು. ಈಗ ಬಾಲಿವುಡ್ ಕಾಮಿಡಿಯನ್ ಕಪಿಲ್ ಶರ್ಮಾ, ನಟಿ ಶ್ರದ್ಧಾ ಕಪೂರ್ ಹುಮಾ ಖುರೇಷಿ ಹಾಗೂ ಹೀನಾ ಖಾನ್​ಗೆ ನೋಟಿಸ್ ಜಾರಿ ಮಾಡಲಾಗಿದೆ. ಇಂದು (ಅಕ್ಟೋಬರ್ 6) ಇವರು ಜಾರಿ ನಿರ್ದೇಶನಾಲಯದ ಎದುರು ವಿಚಾರಣೆಗೆ ಹಾಜರಾಗುವ ನಿರೀಕ್ಷೆ ಇದೆ.
ಪ್ರಮುಖವಾಗಿ 17 ಬಾಲಿವುಡ್ ಸೆಲೆಬ್ರಿಟಿಗಳ ಹೆಸರು ಪ್ರಮುಖವಾಗಿ ಸೇರಿಕೊಂಡಿದೆ ಎನ್ನಲಾಗಿದೆ. ಹಂತ ಹಂತವಾಗಿ ನೋಟಿಸ್ ಜಾರಿ ಮಾಡುವ ಕೆಲಸವನ್ನು ಜಾರಿ ನಿರ್ದೇಶನಾಲಯ (ಇಡಿ) ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಯಾರಿಗೆಲ್ಲ ನೋಟಿಸ್ ಹೋಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಮಹದೇವ್ ಆ್ಯಪ್​ನ ಪ್ರಮೋಟರ್ಸ್​ನಲ್ಲಿ ಸೌರಭ್ ಚಂದ್ರಕರ್ ಹಾಗೂ ರವಿ ಉಪ್ಪಾಲ್ ಪ್ರಮುಖರು. ಇವರು ಬೆಟ್ಟಿಂಗ್​ನಿಂದ ಬಂದ ಹಣದಲ್ಲಿ ಸೆಲೆಬ್ರಿಟಿಗಳಿಗೆ ಸಂಭಾವನೆ ನೀಡಿದ್ದಾರೆ. ಈ ಆ್ಯಪ್​ನ ಪ್ರಮೋಷನ್ ಮಾಡಲು ರಣಬೀರ್ ಕಪೂರ್ ಅವರು ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
ಈ ಆ್ಯಪ್​ನ 100ಕ್ಕೂ ಅಧಿಕ ಮಂದಿ ಪ್ರಮೋಷನ್ ಮಾಡಿದ್ದಾರೆ. ಇವರೆಲ್ಲರಿಗೂ ಶೀಘ್ರವೇ ನೋಟಿಸ್ ಹೋಗಲಿದೆ. ಸೌರಭ್ ಮದುವೆ ದುಬೈನಲ್ಲಿ ನಡೆದಿತ್ತು. ಇದರಲ್ಲಿ 14 ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಅವರಿಗೂ ನೋಟಿಸ್ ಹೋಗಲಿದೆ.

ಸೌರಭ್ ಮದುವೆ ದುಬೈನಲ್ಲಿ ಸಾಕಷ್ಟು ಅದ್ದೂರಿಯಾಗಿ ನಡೆದಿತ್ತು. ಇದಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿತ್ತು. ಮುಂಬೈ ಮೂಲದ ಇವೆಂಟ್ ಮ್ಯಾನೇಜ್​ಮೆಂಟ್​ಗೆ ಹವಾಲ ಮೂಲಕ 140 ಕೋಟಿ ರೂಪಾಯಿ ಹಣ ತಲುಪಿಸಲಾಗಿತ್ತು. ಈ ಮದುವೆಯಲ್ಲಿ ಭಾಗಿಯಾದ ಸೆಲೆಬ್ರಿಟಿಗಳಿಗೆ ಈ ಇವೆಂಟ್ ಮ್ಯಾನೇಜ್​ಮೆಂಟ್​ನವರು ಸಂಭಾವನೆ ನೀಡಿದ್ದರು. ಸೆಲೆಬ್ರಿಟಿಗಳಿಗಾಗಿ ಹಲವು ಪ್ರೈವೇಟ್ ಜೆಟ್​ಗಳನ್ನು ಕೂಡ ಆಯೋಜನೆ ಮಾಡಲಾಗಿತ್ತು. ಈ ಮದುವೆಗೆ ಸುಮಾರು 200 ಕೋಟಿ ರೂಪಾಯಿ ಖರ್ಚಾಗಿದೆ ಎಂದು ತಿಳಿದು ಬಂದಿದೆ.

Exit mobile version