ಬಂಟ್ವಾಳ: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಬಾಲ್ಯವಿವಾಹ ಮಾಡುವ ತಯಾರಿಯಲ್ಲಿದ್ದ ಮನೆಗೆ ಸರಿಯಾದ ಸಮಯದಲ್ಲಿ ಅಧಿಕಾರಿಗಳು ದಾಳಿ ನಡೆಸಿ ಮುಚ್ಚಳಿಕೆ ಬರೆಸಿಕೊಂಡು ಮದುವೆ ನಿಲ್ಲಿಸಿದ ಘಟನೆಯೊಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಉಳ್ಳಾಲ ತಾಲೂಕಿನ ಇರಾ ಎಂಬಲ್ಲಿ ವರದಿಯಾಗಿದೆ.
ವಿಟ್ಲ ಸಿ.ಡಿ.ಪಿ.ಒ.ಇಲಾಖೆಯ ವ್ಯಾಪ್ತಿಗೊಳಪಟ್ಟ ಇರಾ ನಿವಾಸಿ 17 ವರ್ಷದ ಅಪ್ರಾಪ್ತ ಬಾಲಕಿಯನ್ನು ಉಳ್ಳಾಲ ತಾಲೂಕಿನ ಸಜೀಪ ನಡು ಗ್ರಾಮದ ಯುವಕನೋರ್ವನಿಗೆ ಮದುವೆ ನಡೆಸುವ ಉದ್ದೇಶದಿಂದ ನಿಶ್ಚಿತಾರ್ಥ ನಡೆದು, ಮದುವೆಗಾಗಿ ಹಾಲ್ ಕೂಡ ನಿಗದಿಯಾಗಿತ್ತು.
ಮಿತ್ತಕೋಡಿ ರಾಯಲ್ ಗಾರ್ಡ್ ನಲ್ಲಿ ಇಂದು (ಸೆ.25) ಮದುವೆಗಾಗಿ ಎಲ್ಲಾ ತಯಾರಿಗಳು ನಡೆದಿತ್ತು. ಬಾಲಕಿಯ ಮನೆಯಲ್ಲಿ ನಿನ್ನೆ ದಿನ (ಸೆ.24) ಮದರಂಗಿ ಕಾರ್ಯಗಳು ನಡೆಯುತ್ತಿದ್ದ ವೇಳೆ ಇಲಾಖೆಗೆ ಮಾಹಿತಿ ಬಂದಿದ್ದು, ಕೂಡಲೇ ಸಿ.ಡಿ.ಪಿ.ಒ.ಇಲಾಖೆಯ ಹಿರಿಯ ಮೇಲ್ವಿಚಾರಕಿ, ಗ್ರಾ.ಪಂಪಿ.ಡಿ.ಒ. ತಾ.ಪ.ಇಒ, ಕಂದಾಯ ನಿರೀಕ್ಷಕ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು, ಬಂಟ್ವಾಳ ಗ್ರಾಮಾಂತರ ಪೋಲೀಸರು ಮನೆಗೆ ದಾಳಿ ನಡೆಸಿದ್ದಾರೆ.
ಮದುವೆಯಾಗಬೇಕಿದ್ದ ವಧು ಅಪ್ರಾಪ್ತೆ ಎಂಬುದರ ಸಂಪೂರ್ಣ ದಾಖಲೆಗಳ ಮೂಲಕ ಮನೆಗೆ ಹೋಗಿರುವ ಅಧಿಕಾರಿಗಳು ಮನೆಯವರಿಗೆ ಕಾನೂನಾತ್ಮಕ ವಿಚಾರಗಳನ್ನು ತಿಳಿಸಿದ್ದಾರೆ. ಬಳಿಕ ಮದುವೆ ನಿಲ್ಲಿಸಲು ನಿರ್ಧರಿಸಿದ ಮನೆಯವರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.
ಅ ಬಳಿಕ ಮದುವೆ ನಿಗದಿಯಾಗಿದ್ದ ವರನ ಕಡೆಯವರಿಗೆ ಮತ್ತು ಮದುವೆ ಹಾಲ್ ನ ಮಾಲಕರಿಗೆ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಿದ್ದಾರೆ.
ಬಾಲಕಿಗೆ 18 ವರ್ಷ ತುಂಬದ ಕಾರಣ ಇದು ಬಾಲ್ಯ ವಿವಾಹವಾಗುತ್ತದೆ. ಹಾಗಾಗಿ ಕಾನೂನಿನಡಿಯಲ್ಲಿ ಬರುವ ವಿಚಾರಗಳನ್ನು ತಿಳಿಸಿ ಮದುವೆ ನಿಲ್ಲಿಸಲು ಅಧಿಕಾರಿಗಳು ತಿಳಿಸಿದ್ದಾರೆ.